ಕೋಲಾರ: ಬರದ ನಾಡು, ಚಿನ್ನದ ಬೀಡು ಕೋಲಾರದಲ್ಲಿ ಗೀಜಗ ಗೂಡಿನ ಸುಂದರ ಸೊಬಗಿನ ಅಂದ ನೋಡಲು ಎರಡು ಕಣ್ಣುಗಳು ಸಾಲದಾಗಿವೆ. ಬಣ್ಣ ಬಣ್ಣದ ಗೀಜಗ ಪಕ್ಷಿಗಳು ನೀರಿಲ್ಲದ ಬರಿದಾಗಿರುವ ಕೆರೆಗಳಲ್ಲಿ ಬೆಳೆದಿರುವ ಜಾಲಿ ಮರಗಳಲ್ಲಿ ತಮ್ಮದೆ ಕನಸಿನ ಗೂಡು ಕಟ್ಟಿಕೊಂಡು ಆನಂದವಾಗಿವೆ.
ತಾವೆ ನಿರ್ಮಿಸಿಕೊಂಡಿರುವ ಗೂಡಿನಲ್ಲಿ ಕದ್ದು ಮುಚ್ಚಿ ಹಾಡುತ್ತಿರುವ ಬಣ್ಣ ಬಣ್ಣದ ಹಕ್ಕಿ ಸದ್ದು, ಸುಂದರವಾದ ಗೂಡಿನ ವಿನ್ಯಾಸ ನೋಡುಗರನ್ನು ಆಕರ್ಷಿಸುತ್ತಿದೆ. ಕೆಲವು ಪಕ್ಷಿಗಳು ಬೆಳಗ್ಗೆ ಆಹಾರ ಅರಸಿ ಹೊರಟರೆ ಮತ್ತೆ ಸಂಜೆ ಗೂಡು ಸೇರಿಕೊಳ್ಳುತ್ತವೆ. ಅವುಗಳು ಗೂಡು ಸೇರಿಕೊಳ್ಳುತ್ತಿದ್ದಂತೆ ಖುಷಿಯಾಗಿ ಉಳಿದ ಪಕ್ಷಿಗಳೆಲ್ಲ ಗಜಿ ಬಿಜಿ ಎಂದು ಮಾಡುವ ಸದ್ದು, ಅವುಗಳೊಂದಿಗೆ ಮರಿಗಳ ಸಂತೋಷದ ಕ್ಷಣಗಳು ನೋಡುವ ಕಣ್ಣುಗಳಿಗೆ ಮುದ ನೀಡುವುದಲ್ಲದೆ, ಅವುಗಳ ಸದ್ದು ಕಿವಿಗೆ ಸಂಗೀತದ ಮಾದರಿಯ ಆನಂದ ನೀಡುತ್ತದೆ.
Advertisement
Advertisement
ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಜಮ್ಮನಹಳ್ಳಿ ಕೆರೆ, ಕೋಲಾರಮ್ಮ, ಜಿಲ್ಲೆಯ ಅನೇಕ ಕೆರೆಗಳಲ್ಲಿ ಗೀಜಗ ಪಕ್ಷಿಗಳ ಗೂಡು ನಿರ್ಮಿಸಿಕೊಂಡಿವೆ. ಗೀಜಗ ಪಕ್ಷಿಗಳು ಗೂಡು ನಿರ್ಮಾಣ ಮಾಡುವುದು, ಅವುಗಳ ಸಲುಗೆ, ಪ್ರೀತಿ ಎಲ್ಲಾ ಅದ್ಭುತವಾದ ದೃಶ್ಯಗಳು ಹೊಸ ಪ್ರಪಂಚದ ನಿಸರ್ಗದ ಕೊಡುಗೆ ಎಂದರೆ ತಪ್ಪಲ್ಲ.
Advertisement
ಸದ್ಯ ಮರಗಳಿಲ್ಲದೆ, ಕೆರೆ ಕುಂಟೆಗಳೆಲ್ಲಾ ಒಣಗಿದ್ದು ಪಕ್ಷಿಗಳನ್ನು ನೋಡಲು ರಂಗನತಿಟ್ಟುನಂತಹ ಪಕ್ಷಿಧಾಮಗಳಿಗೆ ತೆರಳಬೇಕಿದೆ. ನಗರ ಪ್ರದೇಶಗಳಲ್ಲಿ ಸಣ್ಣ-ಪುಟ್ಟ ಪಕ್ಷಿಗಳಾದ ಗೀಜಗ, ಗುಬ್ಬಚ್ಚಿಗಳನ್ನು ಅಥವಾ ಸಣ್ಣ ಪ್ರಾಣಿ ಪಕ್ಷಿ ಸಂಕುಲವನ್ನು ಪರದೆಯ ಮೇಲೆ ನೋಡುವಂತಹ ಪರಿಸ್ಥಿತಿ ಬಂದೊದಗಿದೆ.