– ತಪ್ಪಿಸಿಕೊಂಡ ಕೋಳಿಗಳನ್ನು ಹುಡುಕುತ್ತಿರುವ ಸಿಬ್ಬಂದಿ
– ಅಧಿಕಾರಿಗಳು, ಗ್ರಾಮಸ್ಥರ ಮಧ್ಯೆ ಪರಿಹಾರದ ಫೈಟ್
ಚಿಕ್ಕಬಳ್ಳಾಪುರ: ಹಕ್ಕಿ ಜ್ವರ (Bird Flu) ರಾಜ್ಯಕ್ಕೂ ಕಾಲಿಟ್ಟಾಯ್ತು. ಹಕ್ಕಿಜ್ವರ ಕಾಣಿಸಿಕೊಂಡಿರೋ ಗ್ರಾಮದಲ್ಲಿರೋ ಕೋಳಿಗಳನ್ನೆಲ್ಲಾ ಆಧಿಕಾರಿಗಳು ಸಾಮೂಹಿಕ ಹತ್ಯೆ ಮಾಡಿ ಗುಂಡಿಗೆ ಹಾಕಿ ಮುಚ್ಚಿದ್ದಾಯ್ತು. ಆದ್ರೆ ಹತ್ಯೆ ಮಾಡಿದ ಕೋಳಿಗಳಿಗೆ ಪರಿಹಾರ ಎಲ್ಲಿ..? ಅದೆಷ್ಟು ಕೊಡ್ತಿರಾ, ಅದ್ಯಾವಾಗ ಕೊಡ್ತೀರಾ? ಅಂತ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
ಹೌದು. ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಪಕ್ಷಿಗಳು ಅದ್ರಲ್ಲೂ ಕೋಳಿಗಳಿಗೆ ಮಾರಕವಾಗಿರೋ ಡೆಡ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಎರಡು ದಿನಗಳಿಂದ ಗ್ರಾಮದಲ್ಲೇ ಬೀಡುಟ್ಟಿದೆ. ಇರೋ ಬರೋ ಕೋಳಿಗಳನ್ನ ಸೆರೆಹಿಡಿದು ಹತ್ಯೆ ಮಾಡಿದೆ. ಹಕ್ಕಿ ಜ್ವರ ನಿಯಂತ್ರಣ ಮಾಡಲು ಗ್ರಾಮದಲ್ಲಿರುವ ಮನೆ ಮನೆಗಳಿಗೆ ತೆರಳಿ ಮನೆಯಲ್ಲಿರುವ ಕೋಳಿಗಳನ್ನ ವಶಕ್ಕೆ ಪಡೆದು ಗ್ರಾಮ ಹೊರವಲಯದಲ್ಲಿ ಗುಂಡಿ ತೋಡಿ ಕೋಳಿಗಳನ್ನ ಮುಚ್ಚಿ ನಾಶ ಮಾಡಲಾಗಿದೆ. ತಪ್ಪಿಸಿಕೊಂಡ ಕೋಳಿಗಳಿಗಾಗಿ ಸಿಬ್ಬಂದಿ ಹುಡುಕಾಡಿ ಹಿಡಿಯುತ್ತಿದ್ದಾರೆ.
ಕೋಳಿಗಳನ್ನ ಹಿಡಿಯೋಕೆ ಬಂದ ಅಧಿಕಾರಿಗಳಿಗೆ ಕೋಳಿ ಮಾಲೀಕರು ಆಕ್ಷೇಪಿಸಿದರು. ಮೊದಲು ಪರಿಹಾರ ಎಷ್ಟು ಅಂತ ಹೇಳಿ ಆಮೇಲೆ ಕೋಳಿ ತಗೊಂಡು ಹೋಗಿ ಅಂತ ಗ್ರಾಮಸ್ಥರು ಆಕ್ಷೇಪ ಹೊರಹಾಕಿದ್ರು. ಇದ್ರಿಂದ ಸಹಜವಾಗಿಯೇ ಅಧಿಕಾರಿಗಳು ಹಾಗೂ ಕೋಳಿಗಳ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು.
ಗ್ರಾಮಸ್ಥರ ಆಕ್ರೋಶ, ಆಕ್ಷೇಪ ನಡುವೆಯೂ ಹರಸಾಹಸಪಟ್ಟು ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು ಗ್ರಾಮದಲ್ಲಿದ್ದ 400ಕ್ಕೂ ಹೆಚ್ಚು ಕೋಳಿಗಳನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಹಕ್ಕಿ ಜ್ವರ ಉಲ್ಭಣಿಸಿದಂತೆ ಮಾಡಲು ಕೋಳಿಗಳ ಹತ್ಯೆ ಮಾಡೋದಾಗಿ ಅಧಿಕಾರಿಗಳು ಹೇಳಿದ್ರು. ವಶಕ್ಕೆ ಪಡೆದಿರುವ ಕೋಳಿಗಳ ಲೆಕ್ಕ ಇದ್ದು ಮುಂದಿನ ದಿನಗಳಲ್ಲಿ ಪರಿಹಾರ ನೀಡುವುದಾಗಿ ಗ್ರಾಮಸ್ಥರ ಮನವೊಲಿಸಿದರು.
ಗ್ರಾಮದಲ್ಲಿ 447ಕ್ಕೂ ಹೆಚ್ಚು ಕೋಳಿಗಳಿದ್ದು ಬಹುತೇಕ ಕೋಳಿಗಳನ್ನ ಹಿಡಿದು ಹತ್ಯೆ ಮಾಡಿ ಗುಂಡಿಗೆ ಹಾಕಿ ಮುಚ್ಚಿ ನಾಶ ಮಾಡಲಾಗಿದೆ. ಆದ್ರೆ ಕೋಳಿಗೆ ಕೇವಲ 90 ರೂಪಾಯಿ ಪರಿಹಾರ ಮಾತ್ರ ಸಿಗಲಿದೆಯಂತೆ. ಅದು ಕೂಡ ಸಿಗುತ್ತೋ ಇಲ್ವೋ ಅನ್ನೋ ಅನುಮಾನ ಹೊರಹಾಕಿದ್ದಾರೆ ಗ್ರಾಮಸ್ಥರು.