ಮಡಿಕೇರಿ: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಭೀತಿ ಕೊಡಗಿನಲ್ಲೂ (Kodagu) ಹೆಚ್ಚಾಗಿದ್ದು, ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಆತಂಕಕ್ಕೆ ಒಳಗಾಗಿರುವ ಜನ ಕೋಳಿ ಮಾಂಸಾಹಾರ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬಿರಿಯಾನಿ ಸೇರಿದಂತೆ ಮಾಂಸಾಹಾರ ಹೋಟೆಲ್‌ಗಳು (Non veg Hotel) ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿವೆ.
ಪ್ರವಾಸಿರ ಸ್ವರ್ಗವಾದ ಮಡಿಕೇರಿಯಲ್ಲಿ ಈವರೆಗೆ ಹಕ್ಕಿ ಜ್ವರ (Bird Flu) ಪ್ರಕರಣ ಪತ್ತೆಯಾಗದೇ ಇದ್ದರೂ ಜನ ಮಾತ್ರ ಆತಂಕದಲ್ಲೇ ಇದ್ದಾರೆ. ಕೋಳಿ ಸೇರಿದಂತೆ ಇನ್ನಿತರ ಮಾಂಸಾಹಾರ ಪದಾರ್ಥಗಳ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹೋಟೆಲ್ ಉದ್ಯಮವನ್ನೆ ನಂಬಿ ಬದುಕುತ್ತಿರುವ ಮಾಲೀಕರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಪಶುಸಂಗೋಪನಾ ಇಲಾಖೆ ಮಾರ್ಗಸೂಚಿ ಏನಿದೆ?
1. 70 ಡಿಗ್ರಿ ಸೆಂಟಿಗ್ರೇಡ್ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಕೋಳಿ ಬೇಯಿಸಿ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬಹುದು.
2. ಕೋಳಿ ಮಾಂಸವನ್ನ ಅಡುಗೆಗೆ ತಯಾರು ಮಾಡುವವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.
3. ಅಡುಗೆಗಾಗಿ ಕೋಳಿಮಾಂಸವನ್ನ ತಯಾರು ಮಾಡಿದ ಬಳಿಕ ನಂಜುನಾಶಕದಿಂದ ಕೈಗಳನ್ನ ಶುಚಿಗೊಳಿಸಿಕೊಳ್ಳಬೇಕು.
4. ಹಸಿ ಕೋಳಿಮಾಂಸ, ಅದರ ದ್ರವಗಳು ಅಥವಾ ಬೇಯಿಸಿದ ಮೊಟ್ಟೆಯನ್ನು, ಬೇಯಿಸದೇ ಉಪಯೋಗಿಸುವ ಆಹಾರ ಪದಾರ್ಥಗಳು ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು .
5. ಬೇಯಿಸದಿರುವ, ಅರೆಬೆಂದ ಮೊಟ್ಟೆಯನ್ನ ತಿನ್ನಬಾರದು.
6. ಅಧಿಕ ಉಷ್ಣಾಂಶದ ವಾತಾವರಣದಲ್ಲಿ ವೈರಾಣು ಹೆಚ್ಚಿನ ಕಾಲ ಬದುಕುಳಿಯುವುದಿಲ್ಲ.
ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ:
1. ಸಾರ್ವಜನಿಕರು ಅನಗತ್ಯವಾಗಿ ಕೋಳಿ ಫಾರಂಗೆ ಭೇಟಿ ನೀಡಬಾರದು.
2. ಕೋಳಿ ಫಾರಂನಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರು ತಮ್ಮ ಬಟ್ಟೆ, ಶೂ ಹಾಗೂ ಕೈ, ಕಾಲುಗಳಿಗೆ ನಂಜುನಾಶಕ ದ್ರಾವಣ ಸಿಂಪಡಿಸಬೇಕು.
3. ಕೋಳಿ ಸಾಕಾಣಿಕೆಗೆ ಬೇಕಾಗುವ ಸಲಕರಣೆಗಳನ್ನ ಬೇರೆ ಕೋಳಿ ಫಾರಂನಿಂದ ಪಡೆಯಬೇಕಾದರೆ ಸ್ಯಾನಿಟೈಸೆಷನ್ ಮಾಡಬೇಕು ಮತ್ತು ನಂಜುನಾಶಕವನ್ನ ಅಳವಡಿಸಬೇಕು.
4. ಕೋಳಿ ಪಂಜರಗಳನ್ನ ದಿನನಿತ್ಯ ಶುಚಿ ಮಾಡುವುದು. ಆಹಾರ ಮತ್ತು ನೀರನ್ನ ಪ್ರತಿದಿನ ಬದಲಾಯಿಸುವುದು.
5. ಕೋಳಿ ಫಾರಂನಲ್ಲಿ ಬೇರೆ ಹಕ್ಕಿಗಳು ಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು.