* ಕೋಳಿ & ಮೊಟ್ಟೆ ತಿನ್ನುವುದರಿಂದ ಸೋಂಕು ಹರಡುತ್ತಾ?
* ಹಕ್ಕಿಜ್ವರ ಸೋಂಕು ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲೇನಿದೆ?
ಕರ್ನಾಟಕದಲ್ಲಿ ಹಕ್ಕಿಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಚಿಕ್ಕಬಳ್ಳಾಪುರದ ವರದನಹಳ್ಳಿಯಲ್ಲಿ ಹಕ್ಕಿಜ್ವರದ ಮೊದಲ ಪ್ರಕರಣ ಕಾಣಿಸಿಕೊಂಡಿತು. ಸೋಂಕಿಗೆ ನೂರಾರು ಜೀವಿಗಳು ಬಲಿಯಾದವು. ತಕ್ಷಣ ಎಚ್ಚೆತ್ತ ಆರೋಗ್ಯ ಇಲಾಖೆ ರಾಜ್ಯದೆಲ್ಲೆಡೆ ಹೈಅಲರ್ಟ್ ಘೋಷಿಸಿದೆ. ರಾಜ್ಯಾದ್ಯಂತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ಸಾವಿರಾರು ಕೋಳಿಗಳ ಮಾರಣಹೋಮ ಮಾಡಲಾಗಿದೆ. ಗಡಿ ಭಾಗಗಳಲ್ಲಿ ನಿಗಾವಹಿಸಲಾಗಿದೆ. ಕಾಯಿಲೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಕೋಳಿ ಫಾರಂ, ಇತರೆ ಪಕ್ಷಗಳ ಸಾಕಾಣಿಕ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಏನಿದು ಹಕ್ಕಿಜ್ವರ? ಇದರ ಇತಿಹಾಸ ಏನು? ಇದು ಸಾಂಕ್ರಾಮಿಕ ಕಾಯಿಲೆಯೇ? ಮನುಷ್ಯರಿಗೂ ಹರಡುತ್ತಾ? ರೋಗಲಕ್ಷಣ ಏನು? ಮುನ್ನೆಚ್ಚರಿಕೆ ಕ್ರಮಗಳೇನು ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ವಿವರ.
ಹಕ್ಕಿಜ್ವರ ಎಂದರೇನು?
ವೈಜ್ಞಾನಿಕವಾಗಿ ಹಕ್ಕಿಜ್ವರವನ್ನು ಹಕ್ಕಿ ಇನ್‌ಫ್ಲೂಯೆನ್‌ಜ ಅಥವಾ ಬರ್ಡ್ ಫ್ಲ್ಯೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಹೆಚ್5ಎನ್1 ಎಂಬ ಹೆಸರಿನ ವೈರಸ್. ಇದು ಮುಖ್ಯವಾಗಿ ಕೋಳಿ ಮತ್ತು ಇತರ ಕೆಲವು ಪಕ್ಷಿ ಪ್ರಭೇದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹಕ್ಕಿಗಳನ್ನು ಹೆಚ್ಚು ಬಾಧಿಸುತ್ತದೆ. ಬಹುಬೇಗ ಹರಡುವ ಜ್ವರ ಇದಾಗಿದೆ.
ಸೋಂಕಿನ ಇತಿಹಾಸವೇನು?
ಉತ್ತರ ಇಟಲಿಯ ಎಡೋರ್ಡೊ ಪೆರೊನ್ಸಿಟೊ ಹೆಸರಿನ ಪ್ಯಾರಸಿಟಾಲಜಿಸ್ಟ್ ಮೊಟ್ಟಮೊದಲ ಬಾರಿಗೆ ಹಕ್ಕಿಜ್ವರ ಸೋಂಕನ್ನು ಪತ್ತೆಹಚ್ಚಿದರು. ಹಕ್ಕಿಗಳಲ್ಲಿ ಈ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಿದರು. ಆ ಸಂದರ್ಭದಲ್ಲಿ ಹಕ್ಕಿಜ್ವರಕ್ಕೆ ಅನೇಕ ಪಕ್ಷಗಳು ಬಲಿಯಾಗಿದ್ದವು. ಬಳಿಕ 1955ರಲ್ಲಿ ಹಕ್ಕಿಜ್ವರ ಉಂಟು ಮಾಡುವ ವೈರಸ್ ಅನ್ನು ಟೈಪ್ ಎ ಇನ್ಫ್ಲುಯೆನ್ಸ ವೈರಸ್ ಎಂದು ಗುರುತಿಸಲಾಯಿತು.
1996ರಲ್ಲಿ ಹೆಚ್5ಎನ್1 ಹೆಚ್‌ಪಿಎಐ ವೈರಸ್ ಚೀನಾದ ಹೆಬ್ಬಾತುಗಳಲ್ಲಿ ಪತ್ತೆಯಾಯಿತು. 1997ರಲ್ಲಿ ಹಾಂಗ್ ಕಾಂಗ್‌ನಲ್ಲಿ ಹೆಚ್5ಎನ್1ಗೆ 18 ಮಂದಿ ತುತ್ತಾಗಿದ್ದರು. ಅವರ ಪೈಕಿ 6 ಮಂದಿ ಬಲಿಯಾದರು. ಲಕ್ಷಾಂತರ ಪಕ್ಷಿಗಳಿಗೆ ಸೋಂಕು ತಗುಲಿತು. ಬರುಬರುತ್ತಾ ಈ ವೈರಸ್ ಜಗತ್ತಿನ ಇತರೆ ದೇಶಗಳಿಗೆ ಹರಡಿತು. ಲಕ್ಷಾಂತರ ಪಕ್ಷಿಗಳು ಸೋಂಕಿಗೆ ಬಲಿಯಾದವು.
ಸಾಂಕ್ರಾಮಿಕ ಕಾಯಿಲೆ?
ಹೆಚ್5ಎನ್1 ವೈರಸ್‌ನಿಂದ ಹರಡುವ ರೋಗ ಹಕ್ಕಿಜ್ವರ. ಟರ್ಕಿ ಕೋಳಿ, ಗಿನಿ ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಇದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಬರುವ ಹಕ್ಕಿಗಳಲ್ಲಿ ಸೋಂಕಿದ್ದರೆ ಅವುಗಳ ಜೊತೆ ಸಂಪರ್ಕ ಬೆಳೆಸುವ ಹಕ್ಕಿಗಳಿಗೂ ತಗುಲುತ್ತದೆ. ಹಕ್ಕಿಗಳ ಗುಂಪಲ್ಲಿ ಸೋಂಕಿತ ಹಕ್ಕಿಯಿದ್ದರೂ ಹರಡುತ್ತದೆ.
ಮನುಷ್ಯರಿಗೂ ಹರಡುತ್ತಾ?
ಹೌದು, ಹೆಚ್5ಎನ್1 ವೈರಸ್ ಸೋಂಕಿತ ಪಕ್ಷಿಗಳಿಂದ ಮನುಷ್ಯರಿಗೂ ಹರಡುತ್ತದೆ. ಸೋಂಕಿತ ಪಕ್ಷಿಗಳ ನೇರ ಸಂಪರ್ಕಕ್ಕೆ ಬಂದರೆ ಪ್ರಾಣಿಗಳು ಮತ್ತು ಮನುಷ್ಯರಿಗೂ ಹರಡುತ್ತದೆ. 1997ರಲ್ಲಿ ಮಾನವರಲ್ಲೂ ಮೊಟ್ಟಮೊದಲ ಬಾರಿಗೆ ಹರಡಿದ್ದು ಕಂಡುಬಂತು. ಹಾಂಗ್ ಕಾಂಗ್‌ನಲ್ಲಿ ಹೆಚ್5ಎನ್1ಗೆ 18 ಮಂದಿ ತುತ್ತಾಗಿ, ಅವರಲ್ಲಿ 6 ಜನರು ಸಾವನ್ನಪ್ಪಿದರು.
ವೈರಸ್ ಪರಿಣಾಮ ಹೇಗಿರುತ್ತೆ?
ಸೋಂಕಿತ ಹಕ್ಕಿಯ ಮಲ, ಮೂತ್ರ, ಸಿಂಬಳ, ಉಸಿರು ರೋಗಾಣುಗಳಿಂದ ತುಂಬಿರುತ್ತದೆ. ಹಕ್ಕಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ ಮತ್ತು ಅವುಗಳನ್ನು ಸಾಕಾಣಿಕೆಗೆ ಬಳಸುವ ಉಪಕರಣಗಳೂ ವೈರಸ್ ಮಯವಾಗಿರುತ್ತವೆ. ಕೋಳಿ ಫಾರಂಗಳಲ್ಲಿ ಕೆಲಸ ಮಾಡುವವರು, ಕೋಳಿ ಸಾಕುವವರು, ಪಕ್ಷಿಗಳು ಮತ್ತು ಅವುಗಳ ಮೊಟ್ಟೆ ಮಾರುವವರು, ಚಿಕನ್ ಅಂಗಡಿಯವರು, ಕೋಳಿ ಮಾಂಸದ ಅಡುಗೆ ಮಾಡುವವರಿಗೂ ಹಕ್ಕಿಜ್ವರ ಅಂಟುವ ಸಾಧ್ಯತೆ ಇರುತ್ತದೆ.
ಸೋಂಕು ಹರಡುವುದು ಹೇಗೆ?
ಈ ವೈರಸ್ ಮುಖ್ಯವಾಗಿ ಉಸಿರಾಡುವ ಗಾಳಿಯಿಂದ ಹರಡುತ್ತದೆ. ಹಕ್ಕಿಯಿಂದ ಹಕ್ಕಿಗೆ ಬಹುಬೇಗನೇ ಹರಡುತ್ತೆ. ಹಕ್ಕಿಗಳು ವಲಸೆ ಹೋದಾಗ, ಗುಂಪಿನಲ್ಲಿ ಸೋಂಕಿತ ಹಕ್ಕಿ ಇದ್ದರೆ ಇತರೆ ಹಕ್ಕಿಗಳಿಗೂ ತಗುಲುತ್ತದೆ. ಕೋಳಿ ಪಾರಂಗಳಲ್ಲಿ ಗಾಳಿ ಮೂಲಕ ಕುಕ್ಕುಟೋದ್ಯಮದಲ್ಲಿ ನಿರತರಾಗುವ ಸಿಬ್ಬಂದಿಯಲ್ಲಿ ಕಾಣಿಸಿಕೊಳ್ಳಬಹುದು. ಹಕ್ಕಿಗಳಿಂದ ಹಕ್ಕಿಗಳಿಗೆ ಹಾಗೂ ಹಕ್ಕಿಗಳಿಂದ ಮನುಷ್ಯರಿಗೆ ಇದು ಹರಡುತ್ತದೆ. ಇದುವರೆಗೂ ಮನುಷ್ಯರಿಂದ ಮನುಷ್ಯರಿಗೆ ಸೋಂಕು ತಗುಲಿರುವ ಉದಾಹರಣೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ವೈರಸ್ ಮನುಷ್ಯ ದೇಹಕ್ಕೆ ವರ್ಗಾವಣೆಗೊಂಡು ಬದುಕುಳಿಯುವ ಶಕ್ತಿ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ರೋಗ ಲಕ್ಷಣಗಳೇನು?
ಹಕ್ಕಿಜ್ವರ ಪೀಡಿತರಲ್ಲಿ ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ಕೆರೆತ, ತಲೆನೋವು, ಕೆಂಗಣ್ಣು, ಸ್ನಾಯುಗಳಲ್ಲಿ ನೋವು, ಆಯಾಸ ಕಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ, ಮೂಗು ಮತ್ತು ಒಸಡಿನಲ್ಲಿ ರಕ್ತ ಸ್ರಾವ, ಭೇದಿಯಾಗುತ್ತದೆ. ಸೋಂಕಿಗೆ ಒಳಗಾಗುವವರಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಕೋಳಿಗಳಲ್ಲಿ ಸೋಂಕು ಪತ್ತೆ ಹೇಗೆ?
ಸೋಂಕಿತ ಕೋಳಿಗಳು ಸಾಮಾನ್ಯವಾಗಿ ಆಹಾರ ತಿನ್ನಲ್ಲ. ಮೊಟ್ಟೆ ಇಡುವುದೂ ಕಡಿಮೆಯಾಗುತ್ತದೆ. ಹೆಚ್ಚು ಓಡಾಡದೇ ನಿತ್ರಾಣಗೊಂಡಂತಿರುತ್ತದೆ. ಅವುಗಳ ಕಣ್ಣುಗಳು ತೇವವಾಗಿರುತ್ತವೆ. ರೆಕ್ಕೆಗಳು ಕೆದರಿದಂತೆ ಇರುತ್ತವೆ. ನೆತ್ತಿ ಭಾಗದಲ್ಲಿ ದ್ರವ ಸಂಗ್ರಹವಾಗುತ್ತದೆ. ತಲೆ ಭಾಗ ಊದಿಕೊಳ್ಳುತ್ತದೆ. ಕಾಲಿನ ಚರ್ಮದ ಅಡಿಯಲ್ಲಿ ರಕ್ತಸ್ರಾವ ಆಗುತ್ತದೆ. ಕೋಳಿಗಳಿಗೆ ದಿಢೀರ್ ಸಾವು ಸಂಭವಿಸಬಹುದು.
ಕೋಳಿ, ಮೊಟ್ಟೆ ತಿಂದರೆ ಹಕ್ಕಿಜ್ವರ ಹರಡುತ್ತಾ?
ಸೋಂಕಿತ ಕೋಳಿ ಹಾಗೂ ಕೋಳಿ ಮೊಟ್ಟೆ ತಿನ್ನುವುದರಿಂದ ಸೋಂಕು ಹರಡುತ್ತದೆಯೇ ಎಂಬ ಗೊಂದಲ ಅನೇಕರಲ್ಲಿದೆ. ಸೋಂಕಿತ ಕೋಳಿ ಮತ್ತು ಮೊಟ್ಟೆಯನ್ನು ಬೇಯಿಸಿ ತಿನ್ನುವುದರಿಂದ ಸೋಂಕು ಹರಡುವುದಿಲ್ಲ. ಕೋಳಿ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು. ಬೇಯಿಸುವುದರಿಂದ ಅದರಲ್ಲಿನ ವೈರಸ್ ಸಾಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಹಸಿ ಮೊಟ್ಟೆ ಸೇವಿಸಬಾರದು ಎಂಬುದು ತಜ್ಞರ ಎಚ್ಚರಿಕೆ ಮಾತು. ಹಕ್ಕಿಜ್ವರ ಸೋಂಕಿತ ಹಸುವಿನ ಹಾಲಿನಲ್ಲೂ ವೈರಸ್ ಇರುತ್ತದೆ. ಹಾಲನ್ನು ಕುದಿಸಿ ಕುಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ.
ಮುಂಜಾಗ್ರತಾ ಕ್ರಮಗಳೇನು?
* ಯಾವುದೇ ಹಕ್ಕಿಗೆ ಜ್ವರ ಕಂಡುಬಂದರೆ ತಕ್ಷಣ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲ (ಕೋಳಿ) ಹತ್ಯೆ ಮಾಡಬೇಕು.
* ಹಕ್ಕಿಜ್ವರ ಕಂಡುಬಂದ ಸ್ಥಳಕ್ಕೆ ಭೇಟಿ ನೀಡುವವರು ತಮಗೆ ಕಾಯಿಲೆ ಬರದಂತೆ ತಡೆಯಲು ದಿನಕ್ಕೊಂದರಂತೆ 7 ದಿನ ಟ್ಯಾಮಿಫ್ಲೂ ಮಾತ್ರೆ ಸೇವಿಸಬೇಕು.
* ಕೋಳಿ ಸಾಕಾಣಿಕೆ ಮಾಡುವವರಿಗೆ ಹಕ್ಕಿಜ್ವರದ ಬಗ್ಗೆ ಜಾಗೃತಿ ಮೂಡಿಸಬೇಕು.
* ಹಕ್ಕಿ ಸಾಕುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು.
* ಹಕ್ಕಿಜ್ವರದಿಂದ ಸತ್ತ ಕೋಳಿಗಳನ್ನು ಐದಾರು ಪದರ ಸುಣ್ಣ ಹಾಗೂ ಮಣ್ಣು ಹಾಕಿ ಹೂಳಬೇಕು ಅಥವಾ ಸುಟ್ಟುಹಾಕಬೇಕು.
* ಹಕ್ಕಿಜ್ವರದ ಸಮಯದಲ್ಲಿ ಯಾರಿಗಾದರೂ ಅತಿಯಾದ ಜ್ವರ, ಉಸಿರಾಟದ ತೊಂದರೆ ಕಂಡುಬಂದರೆ ನಿರ್ಲಕ್ಷಿಸದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು.
ಸೋಂಕಿಗೆ ಲಸಿಕೆ ಇದೆಯೇ?
ಹಕ್ಕಿಜ್ವರ ಸೋಂಕಿಗೆ ಯಾವುದೇ ಲಸಿಕೆ ಇಲ್ಲ. ವಿವಿಧ ಕಂಪನಿಗಳು ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿವೆ.
ಆತಂಕ ಸೃಷ್ಟಿಸಿದ ಹಕ್ಕಿಜ್ವರ
2023-24ರಲ್ಲಿ ಅಮೆರಿಕ ಸೇರಿದಂತೆ ಜಗತ್ತಿನ 108 ದೇಶಗಳಲ್ಲಿ ಹಕ್ಕಿಜ್ವರ ಭಾದಿಸಿದೆ. ಸೋಂಕಿಗೆ ಈಚೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಭಾರತದಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟç, ರಾಜಸ್ಥಾನ, ಕರ್ನಾಟದಲ್ಲಿ ಈಗ ಆತಂಕ ಮೂಡಿಸಿದೆ. ಸದ್ಯ ರಾಯಚೂರಿನ ಮಾನ್ವಿ, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿಯ ಸಂಡೂರು ತಾಲೂಕಿನಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ ಇದುವರೆಗೆ 7 ಸಾವಿರ ಜೀವಂತ ಕೋಳಿಗಳನ್ನು ಸಾಮೂಹಿಕ ಹತ್ಯೆ ಮಾಡಲಾಗಿದೆ.
ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲೇನಿದೆ?
ರಾಜ್ಯದ ಹಲವೆಡೆ ಹಕ್ಕಿಜ್ವರ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿ ಹೊರಡಿಸಿದೆ.
* ಹಕ್ಕಿಜ್ವರ ಕಂಡುಬಂದ ಸ್ಥಳದ 3 ಕಿಮೀ ವ್ಯಾಪ್ತಿಯಲ್ಲಿ ಮಾಂಸ ಮಾರುವಂತಿಲ್ಲ. (ಈ ವ್ಯಾಪ್ತಿಯಲ್ಲಿ ಯಾರೂ ಓಡಾಡುವಂತಿಲ್ಲ)
* ಹಕ್ಕಿಜ್ವರ ಕಂಡುಬಂದ 10 ಕಿಮೀ ವ್ಯಾಪ್ತಿ ಸರ್ವಲೆನ್ಸ್ ಸ್ಥಳ ಎಂದು ಘೋಷಿಸಬೇಕು. ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹಾಕಬೇಕು.
* ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅರ್ಧಂಬರ್ಧ ಬೇಯಿಸಿದ ಮಾಂಸ ತಿನ್ನುವಂತಿಲ್ಲ.
* ಪೌಲ್ಟ್ರಿಯಲ್ಲಿ ಕೆಲಸ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು.
* ಕೋಳಿ ಮಾಂಸ ಮಾರುವವರು ಮಾಸ್ಕ್, ಗ್ಲೌಸ್ ಧರಿಸಬೇಕು.
* ಹಕ್ಕಿಗಳು, ಕೋಳಿಗಳ ಸಂಪರ್ಕದಲ್ಲಿ ಇರುವವರಿಗೆ ಔಷಧ ನೀಡಬೇಕು.
* ರೋಗ ಪತೆಯಾದ ಸ್ಥಳದಿಂದ 1 ಕಿಮೀ ವ್ಯಾಪ್ತಿಯಲ್ಲಿ ಎಲ್ಲ ಕೋಳಿಗಳನ್ನು ಹತ್ಯೆ ಮಾಡಿ ಹೂಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಿದೆ.