ರಾಮನಗರ: ಪಡಿತರ ಪಡೆಯಲು ಇದ್ದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಶೀಘ್ರವೇ ರದ್ದುಗೊಳಿಸುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಡಿತರ ಪಡೆಯಲು ಇದ್ದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಶೀಘ್ರವೇ ರದ್ದುಗೊಳಿಸುವುದಾಗಿ ತೀರ್ಮಾನ ತೆಗೆದುಕೊಂಡಿದ್ದೇನೆ. ಬಯೋಮೆಟ್ರಿಕ್‍ನಿಂದಾಗಿ ಉದ್ಭವಿಸಿದ್ದ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ತಿಳಿಸಿದರು.
ಅಭಿಮಾನದಿಂದ ಆಶೀರ್ವಾದ ಮಾಡಿದರೂ ಬಂದಿಲ್ಲ ಎಂಬ ಮಾತನ್ನು ನಾನು ಕೇಳಿಸಿಕೊಂಡಿದ್ದೇನೆ. ಆದರೆ ಆಡಳಿತದ ಒತ್ತಡದಿಂದ ಬರಲು ಸಾಧ್ಯವಾಗಿರಲಿಲ್ಲ ಇದೀಗ ಬಂದಿದ್ದೇನೆ. ನಾಮಪತ್ರ ಹಾಕಲು ಅವಕಾಶ ನೀಡಿ ಗೆಲುವು ನೀಡಿದ್ದೀರಿ. ಇದು ನನ್ನ ಗೆಲುವಲ್ಲ ಕ್ಷೇತ್ರದ ಜನರ ಗೆಲುವಾಗಿದೆ. ಚುನಾವಣೆಯಾದ ಮೇಲೆ ಕುಮಾರಣ್ಣ ಯಾವ ಕ್ಷೇತ್ರಕ್ಕೆ ರಾಜೀನಾಮೆ ನೀಡ್ತಾರೆ ಅನ್ನೋದು ಅನುಮಾನ ಇತ್ತು, ನಾನು ಅಂತಿಮವಾಗಿ ಚನ್ನಪಟ್ಟಣ ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.
ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣುಗಳು ಇದ್ದಹಾಗೆ. 20 ವರ್ಷಗಳಿಂದ ಚನ್ನಪಟ್ಟಣ ಕ್ಷೇತ್ರಕ್ಕೆ ಶಾಪವಂಟಿತ್ತು, ಇದೀಗ ಜೆಡಿಎಸ್ ಮತ್ತೆ ಗೆಲ್ಲುವ ಮೂಲಕ ಶಾಪವಿಮೋಚನೆಯಾಗಿದೆ. ಜಿಲ್ಲಾಧಿಕಾರಿಗಳ ಜೊತೆ ಸಮಗ್ರ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಚರ್ಚಿಸಿದ್ದೇನೆ. ಚನ್ನಪಟ್ಟಣದ ಎಲ್ಲ ಕೆರೆಗಳನ್ನು ತುಂಬಿಸುವುದು ಹಾಗೂ ಕಣ್ವ ಜಲಾಶಯ ತುಂಬಿಸಿ ಅದರಿಂದ ಹಳ್ಳಿಗಳಿಗೆ ನೀರಾವರಿ ಅವಕಾಶ ಕಲ್ಪಿಸುವುದು, ರಾಮನಗರ ಹಾಗೂ ಚನ್ನಪಟ್ಟಣ ನಗರಗಳಿಗೆ ಪ್ರತ್ಯೇಕ ಪೈಪ್ ಲೈನ್ ಮೂಲಕ ಕಾವೇರಿ ನೀರು ಒದಗಿಸುವ ಯೋಜನೆಯನ್ನು ಜಾರಿಗೊಳಿಸುತ್ತೇನೆ ಎಂದು ತಿಳಿಸಿದರು.
ಸಿಎಂ ಆದ ಬಳಿಕ ಪ್ರಾರಂಭವಾದ ಮಳೆ ನಿರಂತರವಾಗಿ ಆಗುತ್ತಿದೆ. ದೇವರ ಕೃಪೆಯಿಂದ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿನ ಕ್ಯಾತೆ ತಪ್ಪಿದೆ. ಕೇಂದ್ರದಿಂದ 5 ಮೆಗಾಡೈರಿಗಳ ನಿರ್ಮಾಣಕ್ಕೆ ಅನುದಾನ ತರಲಾಗಿದೆ. ಥೈಲ್ಯಾಂಡ್ ಮಾದರಿಯಲ್ಲಿ ರೇಷ್ಮೆಯ ಉಪಪದಾರ್ಥಗಳ ಉತ್ಪಾದನೆಯಾಗಬೇಕು. ಅಲ್ಲದೇ ರಾಮನಗರ- ಚನ್ನಪಟ್ಟಣದ ಮಧ್ಯೆ 500 ಎಕರೆ ಪ್ರದೇಶದಲ್ಲಿ ಸೂಪರ್ ಮಾರುಕಟ್ಟೆ ನಿರ್ಮಿಸುವುದಾಗಿ ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು, ಟೀಚರ್‍ಗಳು, ಅಡುಗೆ ತಯಾರಕರ ಹೊರೆಯನ್ನ ಇದೀಗ ನನ್ನ ಮೇಲೆ ಹೊರಿಸಿದ್ದೀರಿ, ಮಾಧ್ಯಮಗಳಲ್ಲಿ ನನ್ನ ವಿರುದ್ದವೇ ಸುದ್ದಿಗಳು ಪ್ರಸಾರವಾಗುತ್ತಿವೆ. ಯಾರದ್ದೇ ಕ್ಷೇತ್ರವಾದ್ರೂ ಸಿಎಂ ಇಲ್ನೋಡಿ ಅಂತಾರೆ, ಜಗದೀಶ್ ಶೆಟ್ಟರ್ ಕ್ಷೇತ್ರದ ಸಮಸ್ಯೆಗೆ ಸಿಎಂಗೆ ಧಿಕ್ಕಾರ ಅಂತಾರೆ. ಯಾರೋ ಮಾಡಿದ್ದ ತಪ್ಪನ್ನೆಲ್ಲ ಕುಮಾರಸ್ವಾಮಿ ತಲೆಗೆ ಕಟ್ತಾರೆ ಎಂದು ಮಾಧ್ಯಮದವರ ವಿರುದ್ಧ ಮತ್ತೊಮ್ಮೆ ಹರಿಹಾಯ್ದರು.