ಕಳೆದ ಒಂದು ವಾರದ ಹಿಂದೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾ.ಮಾ.ಹರೀಶ್ ಅವರಿಗೆ ಸಂದ್ಗಿದ ಪರಿಸ್ಥಿತಿ ಎದುರಾಗಿದೆ. ಹರೀಶ್ ಅವರು ಚುನಾವಣೆಗೆ ನಿಂತಾಗ, ಇವರನ್ನು ಬೆಂಬಲಿಸಿದ್ದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪತ್ರವೊಂದನ್ನು ಬರೆದಿದ್ದು, ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ರೂಪಾಯಿಯ ದುರುಪಯೋಗ ಆಗಿದೆ. ಅದನ್ನು ತನಿಖೆ ಮಾಡಿಸಿ ಸೂಕ್ತ ಕ್ರಮ ತಗೆದುಕೊಳ್ಳುವಂತೆ ಮನವಿಯನ್ನು ಸಲ್ಲಿಸಿದ್ದಾರೆ.
ನಿನ್ನೆಯಷ್ಟೇ ಭಾ.ಮಾ.ಹರೀಶ್ ಅವರನ್ನು ಭೇಟಿ ಮಾಡಿ ಫಿನಾಯಿಲ್ ಮತ್ತು ಪೊರಕೆಯನ್ನು ನೀಡಿದ್ದ ರಾಜೇಂದ್ರ ಸಿಂಗ್ ಬಾಬು, ವಾಣಿಜ್ಯ ಮಂಡಳಿಯಲ್ಲಿ ನಡೆದ ಅವ್ಯವಹಾರಗಳನ್ನು ಸ್ವಚ್ಛ ಮಾಡಿ ಎಂದು ಶುಭ ಹಾರೈಸಿದ್ದರು. ಇದೇ ಸಂದರ್ಭದಲ್ಲಿ ಮನವಿ ಪತ್ರ ಮತ್ತು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಿರುವ ದೂರಿನ ಪತ್ರವನ್ನು ಅಧ್ಯಕ್ಷರಿಗೆ ನೀಡಿದ್ದರು. ಸತ್ಯಾಸತ್ಯತೆ ಪರೀಕ್ಷೆ ನಡೆಸಿ ಎಂದು ನಿವೇದನೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?
ಭಾ.ಮಾ.ಹರೀಶ್ ಅವರಿಗೆ ಕೊಟ್ಟ ಮನವಿ ಪತ್ರದಲ್ಲಿ “ಎಂಬತ್ತು ವರ್ಷದ ಇತಿಹಾಸವಿರುವ ಮಾತೃಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಅನೇಕ ರೀತಿಯ ಅಪಸ್ವರಗಳು ಕೇಳಿ ಬರುತ್ತಿವೆ. ಪೂರಕವಾಗಿ ಅನೇಕ ದೂರುಗಳು ನ್ಯಾಯಾಲಯದಲ್ಲಿವೆ. ಸಿಸಿಐನಲ್ಲಿ ಅನೇಕ ಕೋಟಿ ದಂಡ ಕಟ್ಟಿರುವುದು ಆಯ್ಕೆಯಾದ ಪದಾಧಿಕಾರಿಗಳ ಅನುಭವದ ಕೊರತೆ ಅನಿಸುತ್ತಿದೆ. ಸದಸ್ಯರ ಹಣ ಊಹಿಸಲು ಅಸಾಧ್ಯವಾಗದಂತೆ ಖರ್ಚಾಗುತ್ತಿರುವುದು ದುರಂತ’ ಎಂದು ಬರೆದಿದ್ದಾರೆ ರಾಜೇಂದ್ರ ಸಿಂಗ್ ಬಾಬು.
ಅಲ್ಲದೇ, ಜಿಲ್ಲಾ ನೋಂದಣಾಧಿಕಾರಿಗಳಿಗೆ ಕೊಟ್ಟ ದೂರನ್ನು ಅವರು ಉಲ್ಲೇಖಿಸಿ, “ಈಗಾಗಲೇ ಸದರಿ ಸಂಸ್ಥೆಯಲ್ಲಿ ಸ್ವಜನ ಪಕ್ಷಪಾತ, ಹಣ ದುರುಪಯೋಗ, ಬೈಲಾ ಉಲ್ಲಂಘನೆ, ನಿಯಮ ಬಾಹಿರ ಚಟುವಟಿಕೆಗಳು ಸೇರಿದಂತೆ ಹಲವು ಗುರುತರವಾದ ಆರೋಪಗಳನ್ನು ದೂರುದಾರರು ಜಿಲ್ಲಾ ನೋಂದಣಾಧಿಕಾರಿಗಳಿಗೆ ನೀಡಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ
2020ರಲ್ಲಿ ನೋಂದಣಾಧಿಕಾರಿಗಳಿಗೆ ಕೊಟ್ಟ ದೂರಿನಲ್ಲಿ ಏನಿದೆ?
ಸಣ್ಣಪುಟ್ಟ ದುರಸ್ಥಿ ಕಾಮಗಾರಿಗೆ ನಾಲ್ಕೈದು ಪಟ್ಟು ಹಣ ಖರ್ಚು ಮಾಡಿರುವುದು. ಉದಾಹರಣೆಗೆ 2 ಶೌಚಾಲಯ ದುರಸ್ಥಿತಿಗೆ ಸುಮಾರು 30 ಲಕ್ಷ ಖುರ್ಚು ಮಾಡಿ ಸಂಘದ ಹಣ ದುರುಪಯೋಗ. ಕಳಸಾ ಬಂಡೂರಿ ಹೋರಾಟದ ಹೆಸರಿನಲ್ಲಿ ಸುಳ್ಳು ಲೆಕ್ಕ ನೀಡಿ ಅನವಶ್ಯಕವಾಗಿ ಸುಮಾರ 40 ಲಕ್ಷ ಖರ್ಚು ಮಾಡಿರುವುದು. ಸಂಸ್ಥೆಯ ವಜ್ರ ಮಹೋತ್ಸವ ಸಂದರ್ಭದಲ್ಲಿ ಎಲ್ಲ ಸದಸ್ಯರಿಗೆ ಬೆಳ್ಳಿ ತಟ್ಟೆ ನೀಡಿದ್ದೇವೆ ಎಂದು ಹತ್ತಾರು ಲಕ್ಷಗಳ ಅವ್ಯವಹಾರ. ಸಿಸಿಐ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳಲ್ಲಿ ವೈಯಕ್ತಿಕವಾಗಿ ಸದಸ್ಯರುಗಳಿಗೆ ಪಾವತಿಸಲು ಹಾಕಿದ ದಂಡದ ಹಣ ಎರಡು ಕೋಟಿ ಐವತ್ತು ಲಕ್ಷ ರೂಪಾಯಿ ಸಂಸ್ಥೆಯಿಂದ ಪಾವತಿಸಿ ಸಂಸ್ಥೆಗೆ ಆರ್ಥಿಕ ನಷ್ಟವುಂಟು ಮಾಡಿರುವುದು. ಹೀಗೆ ಇಪ್ಪತ್ತಕ್ಕೂ ಹೆಚ್ಚು ಅಂಶಗಳನ್ನು ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು, “ಕೋಟ್ಯಂತರ ರೂಪಾಯಿ ದುರುಪಯೋಗ ಆಗಿದೆ ಎಂದು ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿಗಳು ಸಾಕಷ್ಟು ಜನರು ದೂರು ನೀಡಿದ್ದಾರೆ. ದುರುಪಯೋಗ ಆಗಿಲ್ಲವೆಂದು ಹಿಂದಿನ ಪದಾಧಿಕಾರಿಗಳು ಹೇಳುತ್ತಿದ್ದಾರೆ. ನಮಗೆ ಇದರಿಂದ ಸಾಕಷ್ಟು ಗೊಂದಲವಾಗಿದೆ. ಈ ಕುರಿತು ಇಂದಿನ ಅಧ್ಯಕ್ಷರು ಸ್ಪಷ್ಟನೆ ಕೊಡಬೇಕು ಎಂದು ಮನವಿ ಸಲ್ಲಿಸಿದ್ದೇನೆ. ಸೂಕ್ತ ರೀತಿಯಲ್ಲಿ ನಮಗೆ ಉತ್ತರ ಸಿಗುತ್ತದೆ ಎನ್ನುವುದು ನಮ್ಮ ಭಾವನೆ “ಅಂದರು.
ರಾಜೇಂದ್ರ ಸಿಂಗ್ ಬಾಬು ಮನವಿ ಸ್ವೀಕರಿಸಿರುವ ಭಾ.ಮಾ.ಹರೀಶ್ ಕೂಡ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿ, “ಹಿರಿಯ ನಿರ್ದೇಶಕರು ಕೊಟ್ಟ ಮನವಿಯನ್ನು ಸ್ವೀಕರಿಸಿದ್ದೇನೆ. ಎಕ್ಸಿಕ್ಯೂಟಿ ಕಮೀಟಿ ಮೀಟಿಂಗ್ ನಲ್ಲಿ ಇಟ್ಟು ಚರ್ಚೆ ಮಾಡಲಾಗುವುದು’ ಎಂದಿದ್ದಾರೆ.