ಬೆಂಗಳೂರು: ವಿಪಕ್ಷಗಳ ಗದ್ದಲದ ನಡುವೆ ಮುಸ್ಲಿಂ ಗುತ್ತಿಗೆದಾರರಿಗೆ (Muslims Contracter) ಶೇ.4 ಮೀಸಲಾತಿ ನೀಡುವ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ (ತಿದ್ದುಪಡಿ) ವಿಧೇಯಕ 2025’ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ (Government Of Karnataka) ಪಾಸ್ ಮಾಡಿದೆ.
ಈಗಾಗಲೇ ಬಜೆಟ್ನಲ್ಲಿ ಗುತ್ತಿಗೆ ಮೀಸಲಾತಿಯನ್ನು ಎಸ್ಸಿ-ಎಸ್ಟಿ, ಪ್ರವರ್ಗ 1, 2aಗಳ ಜೊತೆಗೆ 2b ಮುಸ್ಲಿಂ ವರ್ಗವನ್ನೂ ಸೇರಿಸಿ ಗುತ್ತಿಗೆ ಮೊತ್ತವನ್ನು 1 ಕೋಟಿಯಿಂದ 2 ಕೋಟಿ ರೂಗೆ ಏರಿಸುವ ಪ್ರಸ್ತಾಪ ಮಾಡಲಾಗಿತ್ತು. ಇಂದು ಮಂಡನೆಯಾದ ಬಿಲ್ನಲ್ಲಿ 2b ವರ್ಗಕ್ಕೆ ಶೇ.4 ಮೀಸಲಾತಿ ಕೊಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (KTTP) ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ರೆ ಎರಡು ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಸಿಗಲಿದೆ.
ವಿಧೇಯಕ ಪಾಸ್ ಮಾಡುತ್ತಿದ್ದಂತೆ ವಿಪಕ್ಷಗಳು ಆಕ್ರೋಶ ಹೊರಹಾಕಿದವು. ಕೇಸರಿ ಶಾಲು ತೋರಿಸುತ್ತಾ ಮಸೂದೆ ಪ್ರತಿಯನ್ನು ಹರಿದು ಆಕ್ರೋಶ ಹೊರಹಾಕಿದವು. ಸ್ಪೀಕರ್ ಪೀಠ ಹಾಗೂ ಕಾಂಗ್ರೆಸ್ ಸದಸ್ಯತ್ತ ಹರಿದ ಕಾಗದಗಳನ್ನ ಎಸೆದರು. ಕೊನೆಗೆ ಸ್ಪೀಕರ್ ಖಾದರ್ ಅನಿರ್ದಿಷ್ಟಾವಧಿಗೆ ವಿಧಾನಸಭೆ ಕಲಾಪ ಮುಂದೂಡಿದರು. ರಾಷ್ಟ್ರಗೀತೆ ಹಾಡಿ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಲಾಯಿತು. ವಿಧಾನಸಭೆಯಲ್ಲಿ ಅಂಗೀಕಾರವಾದ ಕೆಟಿಟಿಪಿ ಬಿಲ್ ಅನ್ನು ಸ್ಪೀಕರ್ ಪರಿಷತ್ಗೆ ಕಳಿಸಿದರು. ಇದನ್ನೂ ಓದಿ: 4% ಮೀಸಲಾತಿ ಮುಸ್ಲಿಮರಿಗೆ ಮಾತ್ರವಲ್ಲ – ಡಿ.ಕೆ ಶಿವಕುಮಾರ್
ಇದೇ ವೇಳೆ ಬೆಂಗಳೂರು ಅರಮನೆ ಭೂ ಬಳಕೆ ಮತ್ತು ನಿಯಂತ್ರಣ ವಿಧೇಯಕ 2025 ಅನ್ನೂ ಅಂಗೀಕರಿಸಲಾಯಿತು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಠೀಕರಣ ಎಲ್ಲೆ ಮೀರಿದೆ-ಟೆಂಡರ್ನಲ್ಲಿ 4% ಮೀಸಲಾತಿ ವಿಚಾರಕ್ಕೆ ಶೋಭಾ ಕರಂದ್ಲಾಜೆ ಆಕ್ರೋಶ