ಹಾವಿನ ದ್ವೇಷ 12 ವರ್ಷ ಅನ್ನುವ ಮಾತಿದೆ. ಇದು ಸತ್ಯವೋ ಸುಳ್ಳೋ ಬೇರೆ ಪ್ರಶ್ನೆ. ಆದ್ರೆ ಕೆಲವು ಜಾಗಗಳಲ್ಲಿ ಹಾವುಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣಗಳನ್ನೂ ಜನರು ಊಹಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಶೇ. 70ರಷ್ಟು ಹಾವು (Snake) ಕಡಿತದ ಪ್ರಕರಣಗಳಲ್ಲಿ ವಿಷ ಏರುವುದಿಲ್ಲ ಎಂದು ಉರಗ ತಜ್ಞರು ಹೇಳುತ್ತಾರೆ. ಕಚ್ಚಿದ ಹಾವಿನಲ್ಲಿ ವಿಷವಿಲ್ಲದಿರುವುದು, ಕುಟುಕಿದಾಗ ಅಪಾಯಕಾರಿ ಆಗುವಷ್ಟು ಪ್ರಮಾಣದ ವಿಷ ದೇಹ ಸೇರದೇ ಇರುವುದು ಮುಂತಾದ ಹಲವು ಕಾರಣಗಳು ಇದ್ದಿರಬಹುದು. ಕೆಲವೊಮ್ಮೆ ಹಾವು ಕುಟುಕಿದಾಕ್ಷಣ ದೇಹದ ಆ ಭಾಗ ಕೆಂಪಾಗಿ ಊತ, ನೋವು ಕಾಣಬಹುದು, ರಕ್ತ ಹರಿಯಲೂಬಹುದು. ಆದರೆ ಕೆಲ ಜಾತಿಯ ಹಾವುಗಳು ಕಚ್ಚಿದಾಗ ಇಂಥ ಯಾವ ಬಾಹ್ಯ ಲಕ್ಷಣಗಳೂ ಕಾಣದೇ ಹೊಟ್ಟೆ ನೋವು ಬರಬಹುದು.
ಉತ್ತರ ಪ್ರದೇಶದಲ್ಲಿ (Uttar Pradesh) ಇತ್ತೀಚೆಗೆ ವಿಚಿತ್ರ ಪ್ರಕರಣವೊಂದು ವರದಿಯಾಗಿತ್ತು. 24 ವರ್ಷದ ಯುವಕನೊಬ್ಬನನ್ನ ಹಾವು ಬೆನ್ನತ್ತಿತ್ತು. ಫತೇಹ್‌ಪುರದ ವಿಕಾಸ್ ದುಬೆ ಎಂಬ ವ್ಯಕ್ತಿಗೆ ಕಳೆದ 40 ದಿನಗಳಲ್ಲಿ ಏಳು ಬಾರಿ ಹಾವು ಕಚ್ಚಿತ್ತು. ಇದು ವೈದ್ಯರನ್ನೂ ಕಳವಳಕ್ಕೀಡುಮಾಡಿದೆ. ಇನ್ನೂ ನೂರಾರು ಹಾವುಗಳಿಂದ ನೂರಾರು ಬಾರಿ ವ್ಯಕ್ತಿಯೊಬ್ಬ ಕಚ್ಚಿಸಿಕೊಂಡಿದ್ದರು ಅಂದ್ರೆ ನೀವು ನಂಬುತ್ತೀರಾ? ಪ್ರತಿ ದಿನ ಸುಮಾರು 30 ಹಾವುಗಳ ವಿಷವನ್ನಾ ಆಹಾರದಂತೆ ಸೇವಿಸುತ್ತಿದ್ದರು ಅನ್ನೂದನ್ನ ಊಹಿಸಲು ಸಾಧ್ಯವೇ? ನಂಬಲಸಾಧ್ಯವಾದರೂ ಇದು ನಿಜ.
ಅಮೆರಿಕದ ಸ್ನೇಕ್ ಮ್ಯಾನ್ (USA SnakeMan) ಎಂದೇ ಖ್ಯಾತಿಯಾಗಿದ್ದ ವ್ಯಕ್ತಿಯೊಬ್ಬ 173 ಬಾರಿ ವಿವಿಧ ಬಗೆಯ ಹಾವುಗಳಿಂದ ಕಚ್ಚಿಸಿಕೊಂಡಿದ್ದರು. ಪ್ರತಿದಿನ ಸುಮಾರು 30ಕ್ಕೂ ಹೆಚ್ಚು ಸರ್ಪಗಳ ವಿಷ ಸೇವಿಸುತ್ತಿದ್ದರಂತೆ. ಆದರೂ ಅವರು ಬದುಕುಳಿದಿದ್ದೇ ಪವಾಡವೆನ್ನಿಸಿತ್ತು. ಅಷ್ಟಕ್ಕೂ ಅಮೆರಿಕದ ಸ್ನೇಕ್ ಮ್ಯಾನ್ ಯಾರು? ಹಾವಿನ ವಿಷ ಸೇವನೆ ಮಾಡಿದರೂ ಆತ ಬದುಕುಳಿದಿದ್ದು ಹೇಗೆ? ಅದಕ್ಕಾಗಿ ಆತ ಮಾಡುತ್ತಿದ್ದದ್ದು ಏನು? ಎಂಬ ರೋಚಕ ಸಂಗತಿಗಳನ್ನು ತಿಳಿಯೋಣ…
ಅಮೆರಿಕದ ಸ್ನೇಕ್ ಮ್ಯಾನ್ ಯಾರು?
ಹಾವುಗಳ ಪ್ರಪಂಚವೇ ನಿಗೂಢ, ಕೆಲ ಹಾವುಗಳು ಕಚ್ಚಿದ ಕೆಲವೇ ಕ್ಷಣಗಳಲ್ಲಿ ಸಾವು ಸಂಭವಿಸಿದರೆ, ಇನ್ನು ಕೆಲ ಹಾವುಗಳು ಕಚ್ಚಿದ ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಚಿಕಿತ್ಸೆ ಪಡೆಯದಿದ್ದರೇ ನಿಧಾನಗತಿಯಲ್ಲಿ ಸಾವನ್ನು ತರುತ್ತವೆ. ಆದ್ರೆ ಅಮೆರಿಕದ ಸ್ನೇಕ್ ಮ್ಯಾನ್ ಎಂದೇ ಖ್ಯಾತಿಯಾಗಿದ್ದ ʻಬಿಲ್ ಹಾಸ್ಟ್ ಅಕಾʼ (Bill Haast Aka) ಎಂಬ ವ್ಯಕ್ತಿ ನೂರಾರು ಬಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಬದುಕುಳಿದಿರುವುದು ಪವಾಡವೇ ಸರಿ. ಅಲ್ಲದೇ ಈತ ರಕ್ತದಾನ ಮಾಡಿ ಅನೇಕ ಜೀವಗಳನ್ನೂ ಉಳಿಸಿದ್ದಾನೆ. 173 ಬಾರಿ ಅತ್ಯಂತ ವಿಷಕಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದ ಸ್ನೇಕ್ ಮ್ಯಾನ್ ತಮ್ಮ ಜೀವಿತಾವಧಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಹಾವುಗಳನ್ನು ನೋಡಿದ್ದರಂತೆ.
ಹಾವುಗಳ ಬಗ್ಗೆ ಆಸಕ್ತಿ ಹುಟ್ಟಿದ್ದೇಗೆ?
ಸ್ನೇಕ್‌ಮ್ಯಾನ್ ಖ್ಯಾತಿಯ ಬಿಲ್ ಹಾಸ್ಟ್ ಅಕಾ 1910 ರಲ್ಲಿ ನ್ಯೂಜೆರ್ಸಿಯಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿ ಸ್ಕೌಟ್ ಶಿಬಿರಕ್ಕೆ ಸೇರಿದ್ದರು. ಒಂದೊಮ್ಮೆ ಕಾಡಿನಲ್ಲಿ ಕ್ಯಾಂಪ್ ಮಾಡುವ ವೇಳೆ ಹಾವು ಅಕಸ್ಮಾತಾಗಿ ಹಾವು ಕಚ್ಚಿತ್ತು. ಆದ್ರೆ ಹಾಸ್ಟ್‌ಗೆ ಪ್ರಾಣಾಪಾಯ ಸಂಭವಿಸಲಿಲ್ಲ. ಕೆಲ ಗಂಟೆಗಳ ಬಳಿಕ ಹಾವು ಕಚ್ಚಿದ ಕೈ ಭಾಗ ಊದಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಕಾಪರ್ಹೆಡ್ ಎಂಬ ವಿಷಕಾರಿ ಹಾವು ಕಚ್ಚಿತ್ತು. ವಿಷ ಏರಿದ್ದ ಕಾರಣ ಒಂದು ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಈತನಿಗೆ ಹಾವುಗಳ ಬಗ್ಗೆ ಆಕರ್ಷಣೆ ಹೆಚ್ಚಾಯಿತು. ಇದರಿಂದ ಅವುಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಬೆಳೆಸಿಕೊಂಡರು. ವಿವಿಧ ಬಗೆಯ ಹಾವುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು, ಜೊತೆಗೆ ಹಾವುಗಳಿಂದ ಸ್ಟಂಟ್ ಮಾಡಿಸಲು ಪ್ರಾರಂಭಿಸಿ, ಹಾವಿನ ಪ್ರಯೋಗಾಲಯವೊಂದನ್ನು ಆರಂಭಿಸಿದರು.
ಹಾವಿನ ಪ್ರಯೋಗಾಲಯದ ಸೀಕ್ರೆಟ್:
ಹಾವುಗಳ ಅಧ್ಯಯನ ಮಾಡಲು ತೊಡಗಿದ್ದ ಸ್ನೇಕ್ ಮ್ಯಾನ್ ವಿಶೇಷ ಪ್ರಯೋಗಾಲಯವೊಂದನ್ನು ಆರಂಭಿಸಿದ್ದರು. ಹಾವುಗಳ ವಿಷ ಹೊರ ತೆಗೆಯುವುದು ಹಾಗೂ ಅದನ್ನು ಸಂಶೋಧನೆಗಾಗಿ ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಕಳುಹಿಸುವ ಕೆಲಸ ಇಲ್ಲಿ ಆಗುತ್ತಿತ್ತು. ಈ ಪ್ರಯೋಗಾಲಯದಲ್ಲಿ ವಿಶ್ವದ ಅನೇಕ ಬಗೆಯ ಹಾವುಗಳಿದ್ದವು. ಅವುಗಳ ವಿಷದ ಪ್ರಬೇಧಗಳೂ ವಿಭಿನ್ನವಾಗಿದ್ದವು. ಅದರಲ್ಲೂ ಕೆಲ ಹಾವುಗಳ ವಿಷ ಎಷ್ಟು ಅಪಾಯಕಾರಿಯಾಗಿತ್ತೆಂದರೆ, ಕಚ್ಚಿದ ಒಂದೇ ನಿಮಿಷದಲ್ಲಿ ಪ್ರಾಣ ತೆಗೆಯುವಷ್ಟು ಅಪಾಯಕಾರಿಯಾಗಿರುತ್ತಿದ್ದವು. 90ರ ದಶದ ವರೆಗೆ ಹಾಸ್ಟ್ ಅವರ ಈ ಪ್ರಯೋಗಾಲಯ ವಿವಿಧ ವೈದ್ಯಕೀಯ ಉದ್ದೇಶಗಳಿಗಾಗಿ ಪ್ರತಿ ವರ್ಷ ಸುಮಾರು 36 ಸಾವಿರ ವಿಷದ ಮಾದರಿಗಳನ್ನು ಒದಗಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
ವಿಷ ಹೊರತೆಗೆಯುತ್ತಿದ್ದದ್ದು ಹೇಗೆ?
ನೂರಾರು ಹಾವುಗಳಿಂದ ಕಚ್ಚಿಸಿಕೊಂಡಿದ್ದ ಹಾಸ್ಟ್‌ನ ಜೀವನ ಶೈಲಿಯೂ ಅಷ್ಟೇ ಸ್ವಾರಸ್ಯಕರವಾಗಿತ್ತು. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಹಾಸ್ಟ್ ಪ್ರತಿದಿನ ಸುಮಾರು 30 ಹಾವುಗಳ ವಿಷವನ್ನು ಆಹಾರದ ರೀತಿ ಸೇವನೆ ಮಾಡುತ್ತಿದ್ದ. ಜೊತೆಗೆ ಹಾವಿನ ವಿಷ ಹೊರ ತೆಗೆಯುವಾಗಲೂ ಬರಿಗೈನಿಂದಲೇ ಕೆಲಸ ಮಾಡುತ್ತಿದ್ದ. ನಾಗರಹಾವು, ಕಾಳಿಂಗ ಸರ್ಪಗಳಂತಹ ವಿಷಪೂರಿತ ಹಾವುಗಳು ಹಲವಾರು ಬಾರಿ ಕಚ್ಚಿದರೂ ಬದುಕಿರುವುದರ ಹಿಂದೆ ವಿಶೇಷ ಕಾರಣವಿತ್ತು. ಅವರ ಜೀವನದ ಆರು ದಶಕಗಳವರೆಗೆ, ಹಾಸ್ಟ್ ನಿರಂತರವಾಗಿ 32 ಹಾವುಗಳ ವಿಷವನ್ನು ಸಂಯೋಜನೆ ಮಾಡಿ ಸೇವಿಸುತ್ತಿದ್ದರು. ಇದರಿಂದ ಹಾಸ್ಟ್ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟು ಆತ ಭಯಂಕರವಾಗಿ ಸಾಯುತ್ತಾನೆ ಎಂದೇ ವೈದ್ಯರು ಬಹಳಷ್ಟು ಸಲ ಎಚ್ಚರಿಕೆ ನೀಡಿದ್ದರು. ಮಧ್ಯೆ ಮಧ್ಯೆ ಹೊಟ್ಟೆ ನೋವು, ಕಣ್ಣುಗಳ ಸೌರ್ಬಲ್ಯದಿಂದ ನಿದ್ರೆ ಮತ್ತು ಮಾನಸಿಕ ಅಸಮತೋಲನ ಕಾಣಿಸಿಕೊಂಡರೂ ವೈದ್ಯಲೋಕಕ್ಕೆ ಸೆಡ್ಡು ಹೊಡೆದು ಪವಾಡ ಪುರುಷನಂತೆ ಹಾಸ್ಟ್ ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದರು ಎಂದು ವರದಿಗಳು ಹೇಳಿವೆ.
ಹಾವುಗಳಿಗಾಗಿ ಸೇನೆಯ ಕೆಲಸವನ್ನೇ ಬಿಟ್ಟ ಸ್ನೇಕ್ ಮ್ಯಾನ್:
ಹಾಸ್ಟ್ ಅಮೆರಿಕದ ಸೇನೆಯಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜೊತೆಗೆ ವೃತ್ತಿಪರ ಕೋರ್ಸ್‌ಗಳನ್ನೂ ಮಾಡಿಕೊಂಡಿದ್ದರು. ಆದ್ರೆ ಹಾವುಗಳ ಸಾಕಾಣಿಕೆ ಮತ್ತು ಅವುಗಳ ಅಧ್ಯಯನದ ಗುರಿಯಿಂದ ಸೇನೆಯ ಕೆಲಸವನ್ನೇ ಬಿಟ್ಟರು. ಅಮೆರಿಕನ್ ಸ್ನೇಕ್‌ಮ್ಯಾನ್‌ನ ಹಾವುಗಳ ಮೇಲಿನ ಉತ್ಸಾಹದಿಂದ ಅವನ ಮೊದಲ ಮದುವೆ ಮುರಿದುಹೋಯಿತು. ನಂತರ ಅವರು ಎರಡು ಬಾರಿ ವಿವಾಹವಾಗಿದ್ದರು.
21 ಜೀವಗಳನ್ನ ಉಳಿಸಿದ್ದ ಸ್ನೇಕ್ ಮ್ಯಾನ್:
ನಿರಂತರ ಹಾವುಗಳ ವಿಷ ಸೇವನೆಯಿಂದ ಬದುಕಿ ಪವಾಡವನ್ನೇ ಸೃಷ್ಟಿಸಿದ್ದ ಸ್ನೇಕ್ ಮ್ಯಾನ್ 21 ಜೀವಗಳನ್ನೂ ಉಳಿಸಿದ್ದರು ಎಂಬುದು ಗಮನಾರ್ಹ. ಹೌದು. ಅವರು ಸೇವಿಸುತ್ತಿದ್ದ ವಿಷವೇ ರೋಗ ನಿರೋಧಕ ಶಕ್ತಿಯಾಗಿ ಮಾರ್ಪಟ್ಟಿತ್ತು. ಹಾಗಾಗಿ ಹಾವು ಕಡಿತದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವರಿಗೆ ರಕ್ತ ಕೊಟ್ಟು ಕಾಪಾಡಿದ್ದರು. ನಂತರ ಪ್ರಪಂಚದ ಅನೇಕ ದೇಶಗಳಲ್ಲಿ ತುರ್ತು ರಕ್ತದಾನಕ್ಕಾಗಿ ಹಾಸ್ಟ್ ಅನ್ನು ಕರೆಯಲಾಯಿತು. ವಿಷಪೂರಿತ ಹಾವು ಕಡಿತದಿಂದ ಸಾವಿನ ಹಂತ ತಲುಪಿದ್ದ 21 ರೋಗಿಗಳಿಗೆ ಅವರು ತಮ್ಮ ರಕ್ತವನ್ನ ದಾನ ಮಾಡಿದರು. ಇದಕ್ಕಾಗಿಯೇ ವೆನೆಜುವೆಲಾ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನೂ ನೀಡಿತ್ತು ಎಂದು ವರದಿಗಳು ಉಲ್ಲೇಖಿಸಿವೆ.