Latest

ವಿಡಿಯೋ: ಆಟೋ ಚಾಲಕನನ್ನ ಸಿಮೆಂಟ್ ಸ್ಲ್ಯಾಬ್‍ನಿಂದ ಹೊಡೆದು ಕೊಂದೇ ಬಿಟ್ಟ ಬೈಕ್ ಸವಾರ

Published

on

Share this

ಜೈಪುರ: ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರ ಮತ್ತು ಆಟೋ ಚಾಲಕನ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಇಲ್ಲಿನ ಚುರು ಜಿಲ್ಲೆಯ ಸರ್ದಾರ್ ಶಹರ್ ನಗರದಲ್ಲಿ ಬೈಕ್ ಸವಾರನೊಬ್ಬ ಆಟೋ ಚಾಲಕನಿಗೆ ಸಿಮೆಂಟ್ ಸ್ಲ್ಯಾಬ್‍ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಬೈಕ್ ಸವಾರನನ್ನು ಬಂಧಿಸಲಾಗಿದೆ.

ನಡೆದಿದ್ದೇನು?: ಆಟೋ ಚಾಲಕ ಮಸ್ತಾಕ್ ಹಿಂದಿನಿಂದ ವಾಹನವೊಂದನ್ನ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಹಾಲಿನ ಕ್ಯಾನ್‍ಗಳೊಂದಿಗೆ ಹೀರಾಲಾಲ್ ದ್ವಿಚಕ್ರ ವಾಹನದಲ್ಲಿ ವಿರುದ್ಧ ದಿಕ್ಕಿನಿಂದ ಬಂದಿದ್ದಾನೆ. ಮಸ್ತಾಕ್‍ನ ಆಟೋ ಮತ್ತು ಹೀರಾಲಾಲ್‍ನ ದ್ವಿಚಕ್ರ ವಾಹನ ಇನ್ನೇನು ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಕೂದಲೆಳೆ ಅಂತರದಲ್ಲಿ ಮುಂದಕ್ಕೆ ಸಾಗಿವೆ. ಆದ್ರೆ ಇದು ಇಷ್ಟಕ್ಕೇ ಮುಗಿಯಲಿಲ್ಲ. ಸಿಟ್ಟಿಗೆದ್ದ ಹೀರಾಲಾಲ್ ಗಾಡಿಯಿಂದ ಇಳಿದು ಬಂದು ಆಟೋ ಚಾಲಕನೊಂದಿಗೆ ವಾದಕ್ಕೆ ಇಳಿದಿದ್ದಾನೆ.

ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ನಂತರ ಅಲ್ಲಿದ್ದ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಬಳಿಕ ಹೀರಾಲಾಲ್ ಬೈಕ್ ಏರಿ ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಮುಸ್ತಾಕ್ ತನ್ನ ಆಟೋದಲ್ಲಿದ್ದ ಬ್ಯಾಗ್‍ನಿಂದ ಸ್ಕ್ರೂ ಡ್ರೈವರ್ ತೆಗೆದು ಹೀರಾಲಾಲ್ ಮೇಲೆ ದಾಳಿ ನಡೆಸಿ ಇರಿಯಲು ಯತ್ನಿಸಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಹೀರಾಲಾಲ್, ಅಲ್ಲೇ ಇದ್ದ ದೊಡ್ಡ ಸಿಮೆಂಟ್ ಸ್ಲ್ಯಾಬ್‍ವೊಂದನ್ನು ತೆಗೆದುಕೊಂಡು ಮುಸ್ತಾಕ್ ತಲೆಗೆ ಹೊಡೆದಿದ್ದಾನೆ.

ಪರಿಣಾಮ ಮುಸ್ತಾಕ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಮುಸ್ತಾಕ್‍ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ವರದಿಯಾಗಿದೆ.

 

ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನ ನೋಡಿದವರಲ್ಲಿ ಕೆಲವರು ಆಟೋ ಚಾಲಕನದ್ದೇ ತಪ್ಪು ಎಂದಿದ್ದರೆ ಇನ್ನೂ ಕೆಲವರು ಸೀಮೆಂಟ್ ಸ್ಲ್ಯಾಬ್‍ನಿಂದ ಹೊಡೆದ ಬೈಕ್ ಸವಾರನ ತಪ್ಪು ಎಂದಿದ್ದಾರೆ. ಸದ್ಯಕ್ಕೆ ಬೈಕ್ ಸವಾರ ಹೀರಾಲಾಲ್‍ನನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement