ಬೆಂಗಳೂರು: ಜಾಲಿ ಬೈಕ್ ರೈಡ್‍ಗೆ ವೈದ್ಯನೊಬ್ಬ ಮೃತಪಟ್ಟಿದ್ದು, ಮೊತ್ತಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ನಗರದಲ್ಲಿ ಸಂಭವಿಸಿದೆ.
ಬೈಕ್ ಸವಾರ ಡಾ.ನಿಶಾದ್ (28) ಮೃತ ದುರ್ದೈವಿ. ಬೆಂಗಳೂರಿನ ಕೊಡಿಗೆಹಳ್ಳಿ ಫ್ಲೈಓವರ್ ನಲ್ಲಿ ಈ ಘಟನೆ ನಡೆದಿದೆ. ಈ ಅಪಘಾತದಿಂದ ಹಿಂಬದಿ ಸವಾರ ನವೀದ್ ಗೆ ಗಂಭೀರವಾಗಿ ಗಾಯವಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಡಾ.ನಿಶಾದ್ ಸೇರಿದಂತೆ ಇಂದು 15 ಜನರ ತಂಡ ನಂದಿ ಬೆಟ್ಟಕ್ಕೆ ಹೊರಟಿತ್ತು. ಇವರು ಕೆಟಿಎಂ ಸೇರಿದಂತೆ ಐಷರಾಮಿ ಬೈಕ್ ಗಳಲ್ಲಿ ಜಾಲಿ ರೈಡ್ ಹೊರಟಿದ್ದರು. ಆದರೆ ಅತೀ ವೇಗವಾಗಿ ಬೈಕ್ ಚಲಾಯಿಸುತ್ತಿದ್ದು, ಕೊಡಿಗೆಹಳ್ಳಿ ಫ್ಲೈಓವರ್ ನಲ್ಲಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಿಶಾದ್ ಸುಮಾರು 40 ಅಡಿ ದೂರಕ್ಕೆ ಬಿದ್ದಿದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಬೈಕ್ ಸವಾರ ನಿಶಾದ್ ಕೋರಮಂಗಲದಲ್ಲಿ ವಾಸವಿದ್ದು, ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ನಿಶಾದ್ 13 ಲಕ್ಷದ ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದರು.
ಘಟನೆ ನಡೆದ ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.