– ಬೈಕ್ ಕಳ್ಳತನ ಸಾಕಾಗಿ ಸರಗಳ್ಳನಕ್ಕೆ ಇಳಿದ್ರು
– ದುಬಾರಿ ಬೈಕ್‍ಗಳೇ ಇವರ ಟಾರ್ಗೇಟ್
ಬೆಂಗಳೂರು: ರಣಜಿ ಆಟಗಾರ ಹಾಗೂ ಪ್ರಸಕ್ತ ಕರ್ನಾಟಕ ರಣಜಿ ತಂಡ ಕೋಚ್ ಎಸ್. ಅರವಿಂದ್ ಅವರ ರಾಯಲ್ ಏನ್‍ಫೀಲ್ಡ್ ಬೈಕ್ ಕದ್ದಿದ್ದ ಇಬ್ಬರು ಖದೀಮರು ಕೊನೆಗೂ ರಾಜಧಾನಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಯಲ್ ಎನ್‍ಫೀಲ್ಡ್ ಹಾಗೂ ಡ್ಯೂಕ್ ಬೈಕ್‍ಗಳಂತ ದುಬಾರಿ ದ್ವಿಚಕ್ರ ವಾಹನವನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಯಶವಂತಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಂಧ್ರದ ಚಿತ್ತೂರು ಮೂಲದ ಅಬ್ದುಲ್ ವಾಹಿದ್ ಹಾಗೂ ಅಬ್ರಾರ್ ಎಂದು ಗುರುತಿಸಲಾಗಿದೆ.
Advertisement
ಬಂಧಿತರಿಂದ 19 ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಹಲವೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಈ ಖದೀಮರನ್ನು ನಗರದ ಹಲವು ಠಾಣೆಯ ಪೊಲೀಸರು ಹುಡುಕಾಡುತ್ತಿದ್ದರು.
Advertisement
Advertisement
ಕಳೆದ ಇಪ್ಪತ್ತು ದಿನಗಳ ಹಿಂದೆ ರಣಜಿ ಕೋಚ್ ಅರವಿಂದ್ ಅವರ ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನವಾಗಿತ್ತು. ಕಳ್ಳತನವಾಗುವ 10 ದಿನಗಳ ಹಿಂದೆಯಷ್ಟೇ ಅರವಿಂದ್ ಅವರು ಹೊಸತಾಗಿ ರಾಯಲ್ ಎನ್‍ಫೀಲ್ಡ್ ಬೈಕ್ ಖರೀದಿಸಿದ್ದರು. ಈ ಕುರಿತು ಅರವಿಂದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
ಪೊಲೀಸರು ಈ ಚಾಲಾಕಿ ಖದೀಮರಿಗಾಗಿ ಹುಡುಕಾಟ ನಡೆಸುತ್ತಲೇ ಇದ್ದರು. ಕೆಲವು ದಿನಗಳ ಹಿಂದೆ ಯಶವಂತಪುರದ ಮತ್ತಿಕೆರೆಯಲ್ಲಿ ಮಹಿಳೆಯೊಬ್ಬರ 35 ಗ್ರಾಂ ಸರ ಕಸಿದು ಈ ಆರೋಪಿಗಳು ಎಸ್ಕೇಪ್ ಆಗಿದ್ದರು. ಸ್ಥಳೀಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ವಾಹಿದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅಬ್ರಹಾರ್ ಬಿಸಿಎ ವಿದ್ಯಾರ್ಥಿ ಆಗಿದ್ದಾನೆ. ಕೆಲ ತಿಂಗಳ ಹಿಂದೆ ವಾಹಿದ್‍ನ ಬುಲೆಟ್ ಬೈಕ್ ಕಳವಾಗಿತ್ತು. ಇದರಿಂದ ಕೋಪಗೊಂಡ ವಾಹಿದ್ ಬುಲೆಟ್ ಬೈಕ್ ಕದಿಯಲು ಮುಂದಾಗಿದ್ದಾನೆ. ವಾಹಿದ್ ಈ ಪ್ಲಾನ್‍ಗೆ ಅಬ್ರಹಾರ್ ಸಾಥ್ ನೀಡಿದ್ದಾನೆ.
ಆರೋಪಿಗಳು ಇಬ್ಬರು ಕಳೆದ 40 ದಿನಗಳಲ್ಲಿ 20 ಕ್ಕೂ ಹೆಚ್ಚು ಬೈಕ್‍ಗಳನ್ನು ಕಳವು ಮಾಡಿದ್ದಾರೆ. ಮೊದಲು ಮೋಜಿಗಾಗಿ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳು ನಂತರ ಅದನ್ನೇ ಕೆಲಸವನ್ನಾಗಿ ಮಾಡಲು ಆರಂಭಿಸಿದ್ದರು. ಕೊನೆಗೆ ಬೈಕ್ ಕಳ್ಳತನ ಸಾಕಾಗಿ, ಅದೇ ಬೈಕ್‍ನಲ್ಲಿ ಸರಗಳ್ಳತನಕ್ಕೆ ಇಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv