ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣ ವಿಭಾಗದ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಬೈಕ್ ಕಳ್ಳರ ಗ್ಯಾಂಗನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೇತನ್, ಪ್ರವೀಣ್, ಸೈಯದ್, ಸಲೀಂ, ನವಾಜ್, ನಯಾಜ್, ಜಯವರ್ದನ ಮತ್ತು ಕಲ್ಯಾಣ್ ಬಂಧಿತ ಆರೋಪಿಗಳು. ಇವರು ಲಾರಿಯಲ್ಲಿ ಕೋಲಾರದಿಂದ ಟೊಮೆಟೋ ತಂದು ಬನಶಂಕರಿಯ ಸಾರಕ್ಕಿ ತರಕಾರಿ ಮಾರ್ಕೆಟ್‍ಗೆ ಹಾಕುತ್ತಿದ್ದರು. ನಂತರ ಬೆಂಗಳೂರಿನಿಂದ ಕೋಲಾರಕ್ಕೆ ಮರಳಿ ಹೋಗುವಾಗ ಕದ್ದ ಬೈಕ್‍ಗಳನ್ನ ಅದೇ ಟೊಮೆಟೋ ಗಾಡಿಯಲ್ಲಿ ಸಾಗಿಸುತ್ತಿದ್ದರು.
Advertisement
Advertisement
ಬೈಕ್ ಕಳ್ಳರ ಹಾವಳಿಯಿಂದ ತಲೆಕೆಡಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು, ಸಿಸಿಟಿವಿ ಫೂಟೇಜ್ ಆಧಾರದ ಮೇಲೆ 8 ಮಂದಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ಸ್ಕಾರ್ಪಿಯೋ ಕಾರು, ಒಂದು ಆಟೋ ಮತ್ತು 25 ಬೈಕ್ ಮತ್ತು ಒಂದು ಕೆ.ಜಿ ಗಾಂಜಾ, ಒಂದೂವರೆ ಲಕ್ಷ ಹಣ, ಚಿನ್ನ, ಬೆಳ್ಳಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಡಿಸಿಪಿ ದಕ್ಷಿಣ ವಿಭಾಗ ಅಣ್ಣಾಮಲೈ ತಿಳಿಸಿದ್ದಾರೆ.
Advertisement
Advertisement
ಆರೋಪಿಗಳು ಕಳೆದ ಆರೇಳು ತಿಂಗಳಿಂದ ಬನಶಂಕರಿ, ಕೆಎಸ್ ಲೇಔಟ್ ಸೇರಿ ದಕ್ಷಿಣ ವಿಭಾಗದಲ್ಲಿ ತಮ್ಮ ಕೈಚಳಕ ತೋರುತ್ತಿದ್ದರು. ಮಜಾ ಮಾಡಲು ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರು ಏರಿಯಾದಲ್ಲಿ ದಿನಕೊಂದು ಬೈಕಿನಲ್ಲಿ ಶೋಕಿ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.