Bengaluru City
ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ-ಸವಾರ ಸ್ಥಳದಲ್ಲಿಯೇ ಸಾವು

ಬೆಂಗಳೂರು: ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ ಮತ್ತು ಅತ್ತಿಬೆಲೆ ರಸ್ತೆಯ ಕರ್ಪೂರ ಗೇಟ್ ಬಳಿ ನಡೆದಿದೆ.
ಕಾಡುಜಕ್ಕನಹಳ್ಳಿ ನಿವಾಸಿ ತಿಮ್ಮರಾಜು(40) ಮೃತ ದುರ್ದೈವಿ. ಮೃತ ತಿಮ್ಮರಾಜು ಕಾಡುಜಕ್ಕನಹಳ್ಳಿಯ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು. ಆನೇಕಲ್ ನಿಂದ ಅತ್ತಿಬೆಲೆಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ.
ತಿಮ್ಮರಾಜು ಅವರು ಅತ್ತಿಬೆಲೆಯಲ್ಲಿರುವ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಬೈಕಿನಲ್ಲಿ ರಾತ್ರಿ ತೆರಳಿದ್ದರು. ಈ ವೇಳೆ ಕರ್ಪೂರ ಗೇಟ್ ಬಳಿ ಲಾರಿಯೊಂದು ಕೆಟ್ಟು ನಿಂತಿದ್ದನ್ನು ಕತ್ತಲೆಯಲ್ಲಿ ಗಮನಿಸದ ತಿಮ್ಮರಾಜು, ವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ರವಾನಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
