ಬೆಂಗಳೂರು: ಬೈಕಿಗೆ ಹಿಂಬದಿಯಿಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸುಮಾರು 40 ಅಡಿ ಎತ್ತರದ ಫ್ಲೈಓವರ್ ರಸ್ತೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನಿಂದ ತುಮಕೂರು ಕಡೆ ಬರುವ ವೇಳೆ ವೇಗವಾಗಿ ಬಂದ ಇನ್ನೋವಾ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕಿನಲ್ಲಿದ್ದ ಆಂಧ್ರ ಮೂಲದ 25 ವರ್ಷದ ಸಂಜಯ್ ಕುಮಾರ್ ಫ್ಲೈಓವರ್ ರಸ್ತೆಯಿಂದ 40 ಅಡಿ ಕೆಳಗೆ ಬಿದ್ದ ವೇಳೆ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ನರಳಾಡಿ ಸಾವನ್ನಪ್ಪಿದ್ದಾನೆ.
ಬೈಕಿನಲ್ಲಿ ಹಿಂಬದಿ ಕುಳಿತಿದ್ದ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದ್ದು, ಬೈಕ್ ಸವಾರ ಸಂಜಯ್ ಕುಮಾರ್ ಕೆಳಗೆ ಬೀಳುವ ವೇಳೆ ಆತನ ಹೆಲ್ಮೆಟ್ ಕೆಳಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಪಘಾತದ ವೇಳೆ ಜನರು ಧಾವಿಸುವ ದೃಶ್ಯ ಕೂಡ ಸೆರೆಯಾಗಿದೆ. ಸದ್ಯ ಇನ್ನೋವಾ ಕಾರು ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.