– ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಕೋಲಾರ: ಇನ್ನೋವಾ ಕಾರ್‌ಗೆ ಬೈಕ್ ಡಿಕ್ಕಿಯಾಗಿ 5 ಜನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಗರ್ಭಿಣಿ ಮಂಗಳವಾರ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತುಂಬು ಗರ್ಭಿಣಿ ಸುಷ್ಮಿತಾರನ್ನು (32) ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಸುಷ್ಮಿತಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ವಗ್ರಾಮ ಕೆಜಿಎಫ್ (KGF) ತಾಲೂಕಿನ ಕಮ್ಮಸಂದ್ರದಲ್ಲಿ (Kammasandra) ಸುಷ್ಮಿತಾ ಅಂತ್ಯ ಸಂಸ್ಕಾರ ನೆರವೇರಿದೆ.
ಕೋಲಾರದ ನೂತನ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್‌ವೇನಲ್ಲಿ (Bengaluru-Chennai Expressway) ಸೋಮವಾರ ಮಧ್ಯರಾತ್ರಿ ಘಟನೆ ನಡೆದಿದೆ. ಘಟನೆಯಲ್ಲಿ ಸುಷ್ಮಿತಾ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ಸೇರಿ ಮಹೇಶ (45), ಉದ್ವಿತ (2), ರತ್ನಮ್ಮ (60) ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸುಷ್ಮಿತಾ ಹೊರತುಪಡಿಸಿ ಇನ್ನೂ ಮೂರು ಜನ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟವರು ಕೆಜಿಎಫ್ ತಾಲ್ಲೂಕು ಕಮ್ಮಸಂದ್ರ ಗ್ರಾಮದವರಾಗಿದ್ದು, ಬೆಂಗಳೂರಿನಿಂದ ವಾಪಸ್ ಗ್ರಾಮಕ್ಕೆ ತೆರಳುವ ವೇಳೆ ಘಟನೆ ನಡೆದಿದೆ. ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ.