ಪಾಟ್ನಾ: ಭೀಕರ ಪ್ರವಾಹಕ್ಕೆ ಬಿಹಾರ ತತ್ತರಿಸಿ ಹೋಗಿದೆ. ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಬೋಟ್‍ನಲ್ಲಿಯೇ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.
ಬಿಹಾರದ ಮೋತಿಹರಿ ಪ್ರದೇಶ ಸಂಪೂರ್ಣ ಜಲಾವೃತಿಯಾಗಿದೆ. ಭಾನುವಾರದಂದು ಇಲ್ಲಿನ ಗೋಬ್ರಿ ಗ್ರಾಮದ ನಿವಾಸಿ ಸಬೀನ(41) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಗ್ರಾಮ ಜಲಾವೃತಗೊಂಡಿದ್ದ ಕಾರಣಕ್ಕೆ ಮಹಿಳೆಯ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪರದಾಡುತ್ತಿದ್ದರು. ಈ ಬಗ್ಗೆ ತಿಳಿದ ತಕ್ಷಣ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿ ಅವರ ನೆರವಿಗೆ ನಿಂತರು.
Advertisement
Advertisement
ಮಹಿಳೆ ಕುಟುಂಬಸ್ಥರು ಹಾಗೂ ಕೆಲ ಆಶಾ ಕಾರ್ಯಕರ್ತೆಯರ ಸಹಾಯದಿಂದ ಮಹಿಳೆಯನ್ನು ಮೋಟಾರ್ ಬೋಟ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ಮಾಡಿದರು. ಆದರೆ ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ ಬೋಟ್‍ನಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಿದರು.
Advertisement
Advertisement
ಈ ವೇಳೆ ಎನ್‌ಡಿಆರ್‌ಎಫ್ ನರ್ಸಿಂಗ್ ಸಹಾಯಕ ರಾಣಾ ಪ್ರತಾಪ್ ಯಾಧವ್ ಅವರು ಬೋಟ್‍ನಲ್ಲಿ ಇದ್ದರು. ಹೀಗಾಗಿ ಅವರ ಮಾರ್ಗದರ್ಶನ ಪಡೆದು ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಸಬೀನ ಅವರಿಗೆ ಹೆರಿಗೆ ಮಾಡಿಸಿದ್ದಾರೆ.
ತದನಂತರ ತಾಯಿ ಮಗುವನ್ನು ಬಜಾರಿಯಾದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಸದ್ಯ ಇಬ್ಬರು ಆರೋಗ್ಯವಾಗಿದ್ದರೆ.
ಪ್ರವಾಹದ ಸಂಕಷ್ಟದ ಸಮಯದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಂದು ಎರಡು ಜೀವವನ್ನು ಉಳಿಸಿದ್ದಾರೆ. ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.