ಪಾಟ್ನಾ: ಬುಡಕಟ್ಟು ಜನಾಂಗದ 70 ವರ್ಷದ ವೃದ್ಧೆಯೊಬ್ಬಳು ವಾಮಾಚಾರ ಅಭ್ಯಾಸ ಮಾಡುತ್ತಿದ್ದಾಳೆ ಅಂತಾ ಆಕೆಯ ನಾಲಿಗೆಯನ್ನೇ ಕತ್ತರಿಸಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ರೋಹ್ತಾಸ್ ಜಿಲ್ಲೆಯ ರೆದಿಯಾ ಗ್ರಾಮದ ನಿವಾಸಿ ರಾಜ್‍ಕಾಲೊ ಕುನ್ವಾರ್ ಹಲ್ಲೆಗೆ ಒಳಗಾದ ಮಹಿಳೆ. ಅದೇ ಗ್ರಾಮದ ನನ್ಹಾಕ್ ರಜ್ವಾರ್, ಉದಯ್ ರಜ್ವಾರ್ ಮತ್ತು ಛತ್ತು ರಜ್ವಾರ್ ಎಂಬವರು ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಮೂವರ ವಿರುದ್ಧ ತಿಲೌತು ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
Advertisement
ಆಗಿದ್ದೇನು?:
ರಾಜ್‍ಕಾಲೊ ಕುನ್ವಾರ್ ವಿಧವೆಯಾಗಿದ್ದು, ಎಂದಿನಂತೆ ಭಾನುವಾರ ರಾತ್ರಿ ತಮ್ಮ ಮೊಮ್ಮಕ್ಕಳ ಜೊತಗೆ ಮಲಗಿದ್ದರು. ಈ ವೇಳೆ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ಪುಟ್ಟ ಮಕ್ಕಳಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಮಕ್ಕಳು ಹಾಗೂ ವೃದ್ಧೆ ರಾಜ್‍ಕಾಲೊ ಕುನ್ವಾರ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು ವೃದ್ಧೆಯ ನಾಲಿಗೆ ಕತ್ತರಿಸಿ, ಪರಾರಿಯಾಗಿದ್ದಾರೆ.
Advertisement
Advertisement
ಮಕ್ಕಳ ಅಳುತ್ತಿರುವ ಧ್ವನಿ ಕೇಳಿಸಿಕೊಂಡ ಕೆಲ ಗ್ರಾಮಸ್ಥರು ವೃದ್ಧೆಯ ಮನೆಗೆ ಬಂದಿದ್ದಾರೆ. ಈ ವೇಳೆ ರಕ್ತಸ್ರಾವದಿಂದ ಬಳಲುತ್ತಿದ್ದ ರಾಜ್‍ಕಾಲೊ ಕುನ್ವಾರ್ ಅವರನ್ನು ತಿಲೌತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದು, ಸಾಸರಾಮ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಲೌತು ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ. ಬಳಿಕ ವೃದ್ಧೆಯನ್ನು ಸಾಸರಾಮ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಈ ಕುರಿತು ಆರೋಪಿಗಳಾದ ನನ್ಹಾಕ್ ರಜ್ವಾರ್, ಉದಯ್ ರಜ್ವಾರ್ ಮತ್ತು ಛತ್ತು ರಜ್ವಾರ್ ವಿರುದ್ಧ ವೃದ್ಧೆಯು ತಿಲೌತು ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ. ಆಕೆಯ ಹಾಗೂ ಮಕ್ಕಳ ಹೇಳಿಕೆ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ರಾಜ್‍ಕಾಲೊ ಕುನ್ವಾರ್ ಪುತ್ರ ಹಾಗೂ ಸೊಸೆ ಪಂಜಾಬ್‍ನ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಒಬ್ಬ ಮಗನನ್ನು ವೃದ್ಧೆಯ ಬಳಿ ಬಿಟ್ಟು ಹೋಗಿದ್ದಾರೆ.
ವೃದ್ಧೆ ವಾಮಾಚಾರ ಅಭ್ಯಾಸ ಮಾಡುತ್ತಿದ್ದಾಳೆ. ಇದರಿಂದಾಗಿ ತಮ್ಮ ಮನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಅಂತಾ ಶಂಕೆ ವ್ಯಕ್ತಪಡಿಸಿದ್ದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv