Connect with us

Latest

ಹಾಲ್ ಟಿಕೆಟ್ ನಲ್ಲಿ ಫೋಟೋ ನೋಡಿ ದಂಗಾದ ವಿದ್ಯಾರ್ಥಿನಿ!

Published

on

ಪಾಟ್ನಾ: ಬಿಹಾರದ ವಿಶ್ವವಿದ್ಯಾನಿಲಯವೊಂದು ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು, ವಿದ್ಯಾರ್ಥಿನಿಯ ಫೋಟೋ ಬದಲಿಗೆ ಬಿಕಿನಿತೊಟ್ಟ ಬೇರೆ ಹುಡುಗಿಯ ಫೋಟೋ ಹಾಕಲಾಗಿದೆ.

ದರ್ಭಾಂಗಾ ಜಿಲ್ಲೆಯ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾನಿಲಯದಲ್ಲಿ ಈ ಪ್ರಮಾದ ನಡೆದಿದ್ದು, ಮಧುಬನಿಯ ಎಸ್‍ಎಂಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರ ಹಾಲ್ ಟಿಕೆಟ್ ನಲ್ಲಿ ಈ ರೀತಿ ಫೋಟೋ ಬಂದಿದೆ.

ವಿದ್ಯಾರ್ಥಿನಿ ಪರೀಕ್ಷೆಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ತನ್ನ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಅದರಲ್ಲಿದ್ದ ಫೋಟೋ ಕಂಡು ವಿದ್ಯಾರ್ಥಿನಿ ದಂಗಾಗಿದ್ದಾರೆ.

ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿನಿಯ ವಿವರ, ಸಹಿ ಎಲ್ಲವೂ ಸರಿಯಿದ್ದು, ಫೋಟೋದಲ್ಲಿ ಬಿಕಿನಿ ತೊಟ್ಟ ಬೆಡಗಿಯ ಫೋಟೋ ತಪ್ಪಾಗಿ ಮುದ್ರಣವಾಗಿದೆ. ಆಕೆ ಕೂಡಲೇ ಈ ವಿಚಾರವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ವಿದ್ಯಾರ್ಥಿನಿಗೆ ಬೇರೆ ಪ್ರವೇಶ ಪತ್ರ ನೀಡಲು ವಿಶ್ವವಿದ್ಯಾನಿಲಯ ಮುಂದಾಗಿದೆ.

ನಾನು ಆನ್ ಲೈನ್ ನಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡುವಾಗ ಎಲ್ಲವೂ ಸರಿಯಾಗಿತ್ತು. ಆದರೆ ಈಗ ನನ್ನ ಫೋಟೋ ಬದಲಿಗೆ ಬಿಕಿನಿ ತೊಟ್ಟಿರುವ ಇನ್ಯಾರದೋ ಫೋಟೋ ಬಂದಿದೆ. ಇದನ್ನ ಬದಲಿಸಿಕೊಡಿ ಎಂದು ಸೋಮವಾರ ಕೇಳಿದೆ. ಆದರೆ ಮಂಗಳವಾರದಿಂಲೇ ಪರೀಕ್ಷೆ ಆರಂಭವಾಗಲಿದೆ. ಆದರೆ ವಿವಿ ಮಾತ್ರ ಇನ್ನೂ ಹಾಲ್ ಟಿಕೆಟ್ ಬದಲಿಸಿಕೊಟ್ಟಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ಈ ಘಟನೆಗೂ ನಮಗೂ ಸಂಬಂಧವಿಲ್ಲ. ಹಾಲ್ ಟಿಕೆಟ್ ನೀಡಲು ಗುತ್ತಿಗೆ ಪಡೆದಿದ್ದ ಏಜೆನ್ಸಿಯಿಂದ ನಡೆದಿರಬಹುದು ಎಂದು ಕಾಲೇಜ್ ಪ್ರಾಂಶುಪಾಲರಾದ ಡಾ. ಜಗದೀಶ್ ಪ್ರಸಾದ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವಿಯ ಪರೀಕ್ಷಾ ನಿಯಂತ್ರಕರು, ಕೂಡಲೇ ಇದನ್ನ ಸರಿಪಡಿಸುವಂತೆ ಸೂಚಿಸಿದ್ದೇನೆ. ಶೀಘ್ರವಾಗಿ ತಪ್ಪು ಯಾರ ಕಡೆಯಿಂದ ಆಗಿದೆ ಎಂದು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇದೇ ವಿಶ್ವವಿದ್ಯಾನಿಲಯ ಕಳೆದ ವರ್ಷ ವಿದ್ಯಾರ್ಥಿಗಳಿಗೆ ವಿತರಿಸಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ಗಣಪತಿಯ ಫೋಟೋ ಹಾಕಿ ಎಡವಟ್ಟು ಮಾಡಿಕೊಂಡಿತ್ತು.

Click to comment

Leave a Reply

Your email address will not be published. Required fields are marked *