ಪಾಟ್ನಾ: ಬಿಹಾರದ ವಿದ್ಯಾರ್ಥಿಯೊಬ್ಬ ಪದವಿ ಪೂರ್ವ ಪರೀಕ್ಷೆಯ ಪತ್ರಿಕೆಯೊಂದರಲ್ಲಿ 100ಕ್ಕೆ 151 ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದಾನೆ.
ಬಿಹಾರದ ದರ್ಬಂಗಾ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ(ಎಲ್‌ಎನ್‌ಎಂಯು) ಪದವಿ ಪೂರ್ವ ವಿದ್ಯಾರ್ಥಿಯ ಪರೀಕ್ಷೆಯ ಅಂಕ ನೋಡಿ ಎಲ್ಲರೂ ದಿಗ್ಭ್ರಮೆಗೊಳಗಾಗಿದ್ದಾರೆ. ಆತ ವಿಶ್ವವಿದ್ಯಾನಿಲಯದ ಭಾಗ-2 ಪರೀಕ್ಷೆಯ ರಾಜ್ಯಶಾಸ್ತ್ರ ಪತ್ರಿಕೆ-4ರಲ್ಲಿ 100ಕ್ಕೆ 151 ಅಂಕ ಪಡೆದಿರುವುದಾಗಿ ತಿಳಿಸಿದ್ದಾನೆ.
ಫಲಿತಾಂಶವನ್ನು ನೋಡಿ ನನಗೂ ಆಶ್ಚರ್ಯವಾಯಿತು. ಇದು ತಾತ್ಕಾಲಿಕ ಅಂಕಪಟ್ಟಿ ಹೌದು. ಆದರೂ ಫಲಿತಾಂಶವನ್ನು ಬಿಡುಗಡೆ ಮಾಡುವುದಕ್ಕೂ ಮೊದಲು ಅಧಿಕಾರಿಗಳು ಅದನ್ನು ಸರಿಯಾಗಿ ಪರಿಶೀಲಿಸಬೇಕಿತ್ತು ಎಂದು ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ದೊಡ್ಡಗೌಡರ ಮೇಲೆ ಯಾರದ್ದೋ ಕೆಟ್ಟ ಕಣ್ಣು ಬಿದ್ದಿದೆ – ಹೆಚ್‌ಡಿಕೆ, ರೇವಣ್ಣ ಕಣ್ಣೀರು
ಇದೇ ರೀತಿ ಮತ್ತೊಬ್ಬ ವಿದ್ಯಾರ್ಥಿ ತನ್ನ ಬಿಕಾಂ ಭಾಗ-2 ಪರೀಕ್ಷೆಯ ಅಕೌಂಟಿಂಗ್(ಲೆಕ್ಕ ಪತ್ರ) ಹಾಗೂ ಫಿನಾನ್ಸ್(ಹಣಕಾಸು) ಪತ್ರಿಕೆ-4ರಲ್ಲಿ ಶೂನ್ಯ ಅಂಕ ಪಡೆದಿದ್ದರೂ ಮುಂದಿನ ತರಗತಿಗೆ ಬಡ್ತಿ ಪಡೆದಿದ್ದಾನೆ. ಇದನ್ನೂ ಓದಿ: ನಿಮ್ಮ ಬರ್ತ್‌ಡೇ ಇದ್ರೆ ಹೇಳಿ ಅದಕ್ಕೂ ಬರ್ತೀವಿ: ಡಿಕೆಶಿ
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿಶ್ವವಿದ್ಯಾನಿಲಯ ಇದು ಟೈಪಿಂಗ್ ದೋಷ ಎಂದು ತಪ್ಪನ್ನು ಒಪ್ಪಿಕೊಂಡಿದೆ. ಇಬ್ಬರೂ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಮುದ್ರಣ ದೋಷವಾಗಿತ್ತು. ಅದನ್ನು ಈಗ ಸರಿಪಡಿಸಲಾಗಿದ್ದು, ಇಬ್ಬರಿಗೂ ಹೊಸ ಅಂಕಪಟ್ಟಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.