ರಾಷ್ಟ್ರಗೀತೆಗೆ ಅಗೌರವ ಆರೋಪ – ನ್ಯಾಯಾಲಯಕ್ಕೆ ಅರ್ಜಿ
ಪಾಟ್ನಾ: ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ರಾಷ್ಟ್ರಗೀತೆ (National Anthem) ನುಡಿಸುವಾಗ ನಗುತ್ತಾ ಮಾತನಾಡಿದ್ದು, ವಿರೋಧ ಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ.
ನಿತೀಶ್ ಕುಮಾರ್ ಅವರು ಗುರುವಾರ ಪಾಟ್ನಾದ ಪಾಟಲಿಪುತ್ರ ಕ್ರೀಡಾ ಸಂಕೀರ್ಣದಲ್ಲಿ ನಡೆದ ಸೆಪಕ್ತಕ್ರಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಾಷ್ಟ್ರಗೀತೆ ನುಡಿಸುವಾಗ ಐಎಎಸ್ ಅಧಿಕಾರಿ ಮತ್ತು ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಅವರೊಂದಿಗೆ ನಗುತ್ತಾ ಮಾತನಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಿತೀಶ್ ಕುಮಾರ್ ಅಧಿಕಾರಿಯ ಭುಜ ತಟ್ಟಿ ಅವರ ಗಮನ ಸೆಳೆಯಲು ಪ್ರಯತ್ನಿಸಿದ್ದು, ನಗಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ.
ಇದೇ ವಿಚಾರವಾಗಿ ಬಿಹಾರದ ವಿರೋಧ ಪಕ್ಷಗಳು ಶುಕ್ರವಾರ ಉಭಯ ಸದನಗಳು, ಶಾಸಕಾಂಗ ಸಭೆ ಮತ್ತು ಪರಿಷತ್ತಿನಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ನಿತೀಶ್ ಕುಮಾರ್ ಕ್ಷಮೆಯಾಚಿಸಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದವು.
ನ್ಯಾಯಾಲಯಕ್ಕೆ ವಕೀಲನಿಂದ ಅರ್ಜಿ
ನಿತೀಶ್ ಕುಮಾರ್ ಅವರು ರಾಷ್ಟ್ರಗೀತೆಗೆ ಅಗೌರವ ತೋರಿಸಿ, ರಾಜ್ಯಕ್ಕೆ ಅಪಖ್ಯಾತಿ ತಂದಿದ್ದಾರೆ ಎಂದು ಸ್ಥಳೀಯ ವಕೀಲ ಸೂರಜ್ ಕುಮಾರ್ ಎಂಬವರು ಮುಜಾಫರ್‌ಪುರದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ಅಡಿಯಲ್ಲಿ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನ್ಯಾಯಾಲಯವು ಮಾರ್ಚ್ 25 ರಂದು ವಿಚಾರಣೆಯನ್ನು ನಿಗದಿಪಡಿಸಿದೆ.