– ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿದ್ದಾಗ ಘೋಷಣೆ
– ವಾರಕ್ಕೆ ನಾಲ್ಕು ದಿನ ಛತ್ತೀಸ್‌ಗಢಗೆ ಬರುತ್ತಿದ್ದ ನಿತಿನ್
ನವದೆಹಲಿ: ಅಚ್ಚರಿಯ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹೆಸರುವಾಸಿಯಾಗಿರುವ ಬಿಜೆಪಿ ಹೈಕಮಾಂಡ್ (BJP High Command) ಈಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಬಿಜೆಪಿಯ ಕಾರ್ಯಾಧ್ಯಕ್ಷರನ್ನಾಗಿ ಬಿಹಾರದ ಸಚಿವ ನಿತಿನ್ ನಬಿನ್ (Nitin Nabin) ಅವರನ್ನು ಆಯ್ಕೆ ಮಾಡಿದೆ.
45 ವರ್ಷ ನಿತಿನ್ ನಬಿನ್ ಅತ್ಯಂತ ಕಿರಿಯ ಬಿಜೆಪಿ ಕಾರ್ಯಾಧ್ಯಕ್ಷರಾಗಿದ್ದಾರೆ. ಭವಿಷ್ಯದಲ್ಲಿ ಯುವ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡುವ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿ ಈ ಹುದ್ದೆಯನ್ನು ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ. ಬಿಜೆಪಿಯೊಳಗೆ ನಬಿನ್ ಜೊತೆ ನಿಕಟವಾಗಿ ಕೆಲಸ ಮಾಡಿದವರು ಅವರನ್ನು ಕಠಿಣ ಪರಿಶ್ರಮಿ, ರಾಜಕೀಯವಾಗಿ ಕುತೂಹಲಿ ಎಂದು ಬಣ್ಣಿಸಿದ್ದಾರೆ.
ನಿತಿನ್ ಅವರ ತಂದೆ ಜನಸಂಘದ ಮಾಜಿ ಸದಸ್ಯ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 2 ದಶಕಗಳ ರಾಜಕೀಯ ಅನುಭವ ಹೊಂದಿರುವ ಇವರು ಐದು ಬಾರಿ ಬಂಕಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಬಿಹಾರ ಮತ್ತು ಪೂರ್ವ ಭಾರತದಿಂದ ಆಯ್ಕೆಯಾದ ಮೊದಲ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಇವರಾಗಿದ್ದು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಇವರನ್ನು ಅಧ್ಯಕ್ಷರನ್ನಾಗಿ ಅನುಮೋದಿಸುವ ಸಾಧ್ಯತೆಯಿದೆ.
ಛತ್ತೀಸ್‌ಗಢದ ಉಸ್ತುವಾರಿಯಾಗಿದ್ದ ಇವರು ಅಲ್ಲಿ ಪಕ್ಷವನ್ನು ಆಡಳಿತಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರ ಕೆಲಸವನ್ನು ಗುರುತಿಸಿದ ಬಳಿಕ ಇವರಿಗೆ ದೆಹಲಿ ಚುನಾವಣೆಯ ಪ್ರಚಾರದಲ್ಲಿ ಪ್ರಮುಖ ಪಾತ್ರ ನೀಡಲಾಗಿತ್ತು.
VIDEO | Patna: Newly appointed BJP National Working President Nitin Nabin says, “The party has always given opportunities to the youth and supported them by entrusting such responsibilities. Party workers must work patiently for the organisation, as the BJP is the only party… pic.twitter.com/PktdsfUm8B
— Press Trust of India (@PTI_News) December 15, 2025
ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಿತಿನ್ ಎಂದಿಗೂ ಪಕ್ಷ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. ಉತ್ತಮ ಸಂವಹನ ಕಲೆಯ ಜೊತೆ ಸಂಘಟನಾ ಚಾತುರ್ಯ ಇವರಿಗಿದೆ. ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿ ಉತ್ತಮ ಫಲಿತಾಂಶ ತಂದುಕೊಟ್ಟುವ ಹೆಗ್ಗಳಿಕೆಯಿದೆ. ಎಲ್ಲರನ್ನು ಅದರಲ್ಲೂ ಮುಖ್ಯವಾಗಿ ಪಕ್ಷದ ಹಿರಿಯರನ್ನು ಜೊತೆಯಾಗಿ ನಿತಿನ್ ಕರೆದುಕೊಂಡು ಹೋಗುತ್ತಾರೆ ಎಂಬ ಭಾವನೆ ಪಕ್ಷದೊಳಗಿದೆ.
ನಿತಿನ್ ನಬಿನ್ ಬಿಹಾರದ ಕಾಯಸ್ಥ ಸಮುದಾಯದಿಂದ ಬಂದಿದ್ದಾರೆ. ಬಿಹಾರದಲ್ಲಿ ಕಾಯಸ್ಥ ಮೇಲ್ವರ್ಗದ ಜಾತಿ ಎಂದು ಪರಿಗಣಿಸಿದರೂ ಇತರ ಜಾತಿಗಳ ಜೊತೆ ಸಂಘರ್ಷದಲ್ಲಿ ಇಲ್ಲ. ಬಿಹಾರ ಚುನಾವಣಾ ಸಮಯದಲ್ಲಿ ಗೃಹ ಸಚಿವ ಅಮಿತ್ ಶಾ ನಿತಿನ್ ಮನೆಗೆ ಭೇಟಿ ನೀಡಿ ಅವರ ಸಂಘಟನಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಹಾರ ಚುನಾವಣೆಗೆ ಮೊದಲು ಜೀವಿಕಾ ದೀದಿ ಜಾಲವನ್ನು ಸಜ್ಜುಗೊಳಿಸುವ ಜವಾಬ್ದಾರಿಯನ್ನು ನಬಿನ್ ಅವರಿಗೆ ವಹಿಸಲಾಗಿತ್ತು. ಬಿಹಾರ ಮೈತ್ರಿಕೂಟ ಒಗ್ಗಟ್ಟನ್ನು ಪ್ರದರ್ಶಿಸುವ ಪ್ರಮುಖ ಎನ್‌ಎಡಿಎಎ ಸಮನ್ವಯ ಸಭೆಗಳಲ್ಲಿಯೂ ಇವರು ಭಾಗಿಯಾಗುತ್ತಿದ್ದರು. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ಸಚಿವ ನಿತಿನ್ ನಬಿನ್ ನೇಮಕ
ತಾನು ಕಾರ್ಯಾಧ್ಯಕ್ಷನಾಗುತ್ತೇನೆ ಎನ್ನುವುದು ಸ್ವತ: ನಿತಿನ್ ನಬಿನ್ ಅವರಿಗೆ ತಿಳಿದಿರಲಿಲ್ಲ. ಬಿಹಾರದಲ್ಲಿ ಪಕ್ಷ ಅಧಿಕಾರಕ್ಕೆ ಏರಲು ಕಾರಣರಾದ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ನಿತಿನ್ ಭಾನುವಾರ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಇರುವಾಗಲೇ ನಿತಿನ್ ನಬಿನ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಬಿಜೆಪಿ ಘೋಷಿಸಿತ್ತು.

