ಬಿಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ- ಗುರುವಾರ ಒಂದೇ ದಿನ 58 ಬಲಿ

Public TV
2 Min Read
bihar rain

ಪಾಟ್ನಾ: ಬಿಹಾರದಲ್ಲಿ (Bihar) ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗುತ್ತಿದ್ದು (Rain) ಗುರುವಾರ ಒಂದೇ ದಿನ ರಾಜ್ಯಾದ್ಯಂತ 58 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 23 ಜನರು ಸಿಡಿಲು (Lightning Strikes) ಬಡಿದು ಸಾವನ್ನಪ್ಪಿದ್ದರೆ, 35 ಜನರು ಭಾರೀ ಮಳೆ ಮತ್ತು ಗಾಳಿಯಿಂದ ಮರ, ಗೋಡೆಗಳು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮಾಹಿತಿಯ ಪ್ರಕಾರ ನಳಂದ (Nalanda) ಜಿಲ್ಲೆಯಲ್ಲಿ ಭಾರೀ ಹಾನಿ ಸಂಭವಿಸಿದೆ. ಗಾಳಿಯಿಂದ 22 ಮಂದಿ ಸಾವನ್ನಪ್ಪಿದ್ದಾರೆ. ಸಿವಾನ್‌ನಲ್ಲಿ ಸಿಡಿಲು ಬಡಿದು 4 ಮಂದಿ ಬಲಿಯಾಗಿದ್ದಾರೆ.

ಬಿಹಾರದ ಎಂಟು ಜಿಲ್ಲೆಗಳಲ್ಲಿ ಸಿಡಿಲು ಬಡಿದು 25 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಇದು ಸಂಭವಿಸಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ರೈತರು ಮತ್ತು ದಿನಗೂಲಿ ಕಾರ್ಮಿಕರಾಗಿದ್ದು ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಸಾವನ್ನಪ್ಪಿದ್ದಾರೆ.


ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿ ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಸಲಹೆಗಳನ್ನು ಪಾಲಿಸುವಂತೆ ಅವರು ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ರೂಂ ಹೊರಗೆ ಪರೀಕ್ಷೆ

ಈ ವರ್ಷದ ಫೆಬ್ರವರಿಯಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಬಿಹಾರ ಆರ್ಥಿಕ ಸಮೀಕ್ಷೆಯಲ್ಲಿ 2023 ರಲ್ಲಿ ರಾಜ್ಯದಲ್ಲಿ ಸಿಡಿಲು ಅಥವಾ ಗುಡುಗುನಿಂದ 275 ಮಂದಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.


ದರ್ಭಂಗಾ, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಪಶ್ಚಿಮ ಚಂಪಾರಣ್, ಕಿಶನ್‌ಗಂಜ್, ಅರಾರಿಯಾ, ಸುಪೌಲ್, ಗಯಾ, ಸೀತಾಮರ್ಹಿ, ಶಿಯೋಹರ್, ನಲಂದಾ, ನವಾಡ ಮತ್ತು ಪಾಟ್ನಾ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಭಾರತ ಹವಾಮಾನ ಇಲಾಖೆ ಅರೇಂಜ್‌ ಅಲರ್ಟ್‌ ಜಾರಿ ಮಾಡಿದೆ. ಈ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮಧುಬನಿ, ದರ್ಭಂಗಾ, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಪಶ್ಚಿಮ ಚಂಪಾರಣ್, ಕಿಶನ್‌ಗಂಜ್, ಅರಾರಿಯಾ, ಸುಪೌಲ್, ಗಯಾ, ಸೀತಾಮರ್ಹಿ, ಶಿಯೋಹರ್, ನಲಂದಾ, ನವಾಡ, ಪಾಟ್ನಾಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

Share This Article