ಪಾಟ್ನಾ: ವಾರ್ಡನ್ ಹಾಗೂ 17 ವರ್ಷದ ಬಾಲಾಪರಾಧಿಗೆ ಗುಂಡಿಟ್ಟು ಹತ್ಯೆಗೈದು, ಐವರು ಬಾಲಕರು ಬಾಲಾಪರಾಧ ಮಂದಿರದಿಂದ ಪರಾರಿಯಾದ ಘಟನೆ ಬಿಹಾರದ ಪೂರ್ನಿಯಾ ಪಟ್ಟಣದ ನಡೆದಿದೆ.
ವಾರ್ಡನ್ ವಿಜೇಂದ್ರ ಕುಮಾರ್ ಹಾಗೂ ಸರೋಜ್ ಕುಮಾರ್ (17) ಮೃತ ದುರ್ದೈವಿಗಳು. ಇದೇ ವೇಳೆ ಇಬ್ಬರು ಬಾಲಕರಿಗೆ ಗಾಯವಾಗಿದೆ. ಜೆಡಿಯು ಮುಖಂಡನ ಮಗನೇ ಗುಂಡು ಹಾರಿಸಿದ್ದ ಬಾಲಕ ಎಂದು ವರದಿಯಾಗಿದೆ. ಪರಾರಿಯಾದ ಐವರಲ್ಲಿ ಒಬ್ಬನು ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅವನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.
Advertisement
ನಡೆದದ್ದು ಏನು?
ಬಾಲಾಪರಾಧ ಮಂದಿರದಲ್ಲಿ ಕೆಲವು ಬಾಲಕರು ಅನುಚಿತವಾಗಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ವಾರ್ಡನ್ ವಿಜೇಂದ್ರ, ಅವರ ವರ್ತನೆಯಿಂದ ಉಳಿದ ಬಾಲಾಪರಾಧಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯ ಬಾಲ ನ್ಯಾಯ ಮಂಡಳಿಗೆ ಮನವಿ ಸಲ್ಲಿಸಿದ್ದರು.
Advertisement
Advertisement
ವಿಜೇಂದ್ರ ಅವರ ಮನವಿ ಪರಿಗಣಿಸಿದ ಬಾಲ ನ್ಯಾಯ ಮಂಡಳಿಯು ಬಾಲಕರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಬುಧವಾರ ಒಪ್ಪಿಗೆ ಸೂಚಿಸಿತ್ತು. ಈ ಬೆಳವಣಿಗೆಯನ್ನು ಅರಿತ ಬಾಲಕರು ವಾರ್ಡನ್ ವಿಜೇಂದ್ರ ಕುಮಾರ್ ಹಾಗೂ ತಮ್ಮ ವಿರುದ್ಧ ದೂರು ನೀಡುತ್ತಿದ್ದ ಬಾಲಾಪರಾಧಿ ಸರೋಜ್ ಕುಮಾರ್ ಮೇಲೆ ಕೋಪಗೊಂಡಿದ್ದರು.
Advertisement
ಬುಧವಾರ ಪರಾರಿಯಾಗುವ ವೇಳೆ ವಿಜೇಂದ್ರ ಹಾಗೂ ಸರೋಜ್ ಕುಮಾರ್ ಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಇದೇ ವೇಳೆ ಗುಂಡಿನ ದಾಳಿಯಲ್ಲಿ ಮತ್ತಿಬ್ಬರೂ ಗಾಯಗೊಂಡಿದ್ದಾರೆ. ಬಳಿಕ ಗನ್ ತೋರಿಸಿ, ಗೇಟ್ ತೆಗೆಯುವಂತೆ ಒತ್ತಾಯಿಸಿದ್ದಾರೆ. ಗೇಟ್ ತೆರೆಯುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು, ಆರೋಪಿ ಬಾಲಕರ ಕೈಗೆ ಗನ್ ಹೇಗೆ ದೊರೆಯಿತು? ತಪ್ಪಿಸಿಕೊಳ್ಳಲು ಯಾರು ಕೈ ಜೋಡಿಸಿದ್ದಾರೆ ಎನ್ನುವ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ. ಇತ್ತ ಜೆಡಿಯು ಮುಖಂಡನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv