ನವದೆಹಲಿ: ಇಂದು ಸಂಜೆ 4 ಗಂಟೆಗೆ ಭಾರತೀಯ ಚುನಾವಣಾ ಆಯೋಗ (Election Commission of India) ಸುದ್ದಿಗೋಷ್ಠಿ ನಡೆಸಿ ಬಿಹಾರ ವಿಧಾನಸಭಾ ಚುನಾವಣೆಯ (Bihar Election) ದಿನಾಂಕವನ್ನು ಪ್ರಕಟಿಸಲಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಹಿಂದೆ ಬಿಹಾರದ 243 ಸ್ಥಾನಗಳಿಗೆ ಚುನಾವಣೆಯನ್ನು ನವೆಂಬರ್ 22ರ ಮೊದಲು ಮತ್ತು ಪ್ರಸ್ತುತ ವಿಧಾನಸಭೆಯ ಅವಧಿ ಮುಗಿಯುವ ಮೊದಲು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು.
ರಾಜಕೀಯ ಪಕ್ಷಗಳು ಅಕ್ಟೋಬರ್ ಅಂತ್ಯದಲ್ಲಿ ಆಚರಿಸಲಾಗುವ ‘ಛಠ್ ಪೂಜೆ’ ಹಬ್ಬದ ನಂತರ ತಕ್ಷಣವೇ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಇತರ ರಾಜ್ಯಗಳಲ್ಲಿ ಉದ್ಯೋಗದಲ್ಲಿರುವ ಹೆಚ್ಚಿನ ಸಂಖ್ಯೆಯ ಜನರು ಹಬ್ಬಕ್ಕಾಗಿ ಊರಿಗೆ ಮರಳುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯವ ಸಾಧ್ಯತೆ ಇರುವುದರಿಂದ ಈ ಅವಧಿಯಲ್ಲೇ ಚುನಾವಣೆ ನಡೆಸಬೇಕೆಂದು ಮನವಿ ಮಾಡಿವೆ. ಇದನ್ನೂ ಓದಿ: ಕ್ರಿಕೆಟ್ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ (Nitish Kumar) ನೇತೃತ್ವದ ಎನ್‌ಡಿಎ (NDA) ಮತ್ತು ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆಯಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇದನ್ನೂ ಓದಿ: ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!
ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಬಿಹಾರದಲ್ಲಿ 2020 ರ ವಿಧಾನಸಭಾ ಚುನಾವಣೆಗಳು ಮೂರು ಹಂತಗಳಲ್ಲಿ ನಡೆದಿದ್ದವು. ಎನ್‌ಡಿಎ ಜಯಗಳಿಸಿದ ಬಳಿಕ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ 2022 ರಲ್ಲಿ ನಿತೀಶ್ ಕುಮಾರ್ ಎನ್‌ಡಿಎ ತೊರೆದು ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ ಜೊತೆ ಸೇರಿ ಸರ್ಕಾರ ರಚಿಸಿದ್ದರು. ನಿತೀಶ್ ಕುಮಾರ್ 2024 ರಲ್ಲಿ ಮಹಾಘಟಬಂಧನ್ ಜೊತೆಗಿನ ಸಂಬಂಧವನ್ನು ಮುರಿದು ಎನ್‌ಡಿಎ ಜೊತೆ ಮತ್ತೆ ಕೈಜೋಡಿಸಿ ಅಧಿಕಾರಕ್ಕೆ ಏರಿದ್ದರು.