ಪಾಟ್ನಾ: ಹೋಳಿ (Holi) ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮನೆಯೊಳಗೆ ಇರುವಂತೆ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ತಿಳಿಸಿದ್ದಾರೆ. ಈ ವರ್ಷದ ಹೋಳಿ ಹಬ್ಬವು ಮಾರ್ಚ್ 14 ರಂದು ಬರುತ್ತದೆ. ಇದು ರಂಜಾನ್ ತಿಂಗಳ ಶುಕ್ರವಾರದ ಪ್ರಾರ್ಥನೆ ದಿನವೇ ನಡೆಯಲಿದೆ.
ಮಧುಬನಿ ಜಿಲ್ಲೆಯ ಬಿಸ್ಫಿಯ ಶಾಸಕರಾಗಿರುವ ಹರಿಭೂಷಣ್ ಠಾಕೂರ್ ಮಾತನಾಡಿ, ಈ ಬಾರಿ ಹೋಳಿ ಶುಕ್ರವಾರ ದಿನ ಬರುತ್ತದೆ. ಹೋಳಿ ಸಮಯದಲ್ಲಿ ಮನೆಯೊಳಗೆ ಇರಿ. ಅದನ್ನು ಯಾವುದೇ ಅಡೆತಡೆಯಿಲ್ಲದೆ ಆಚರಿಸೋಣ ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ. 52 ಶುಕ್ರವಾರಗಳಿವೆ. ಅವರು (ಮುಸ್ಲಿಮರು) ಹೋಳಿ ದಿನ ಮಾತ್ರ ಹೊರಗೆ ಬರುವುದನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಹೋಳಿಯಂದು ಹೊರಗೆ ಹೋದಾಗ ಮುಸ್ಲಿಮರ ಮೇಲೆ ಯಾರಾದರು ಬಣ್ಣ ಹಚ್ಚಿದರೆ ನೊಂದುಕೊಳ್ಳಬೇಡಿ ಎಂದು ಶಾಸಕ ತಿಳಿಸಿದ್ದಾರೆ.
ಮುಸ್ಲಿಮರು ಅಬಿರ್ ಮತ್ತು ಗುಲಾಲ್ ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಾರೆ. ಆದರೆ ಹೋಳಿಯಂದು ತಮ್ಮ ಮೇಲೆ ಬಣ್ಣ ಎರಚುವುದರಿಂದ ದೂರವಿರಲು ಬಯಸುತ್ತಾರೆ. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪರಸ್ಪರರ ಧರ್ಮ ಮತ್ತು ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಶಾಸಕರ ಹೇಳಿಕೆಯನ್ನು ಟೀಕಿಸಿದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್, ಬಿಜೆಪಿ ವಿಭಜಕ ರಾಜಕೀಯ ಮಾಡುತ್ತಿದೆ. ಬಿಜೆಪಿ ಕೋಮು ಉದ್ವಿಗ್ನತೆಗೆ ಕಾರಣವಾಗುವ ಹೇಳಿಕೆಗಳನ್ನು ನೀಡಲು ಅವಕಾಶಗಳನ್ನು ಹುಡುಕುತ್ತದೆ ಎಂದು ಆರೋಪಿಸಿದ್ದಾರೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮನೆಯೊಳಗೆ ಇರುವಂತೆ ಸಂಭಾಲ್ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಸಲಹೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಬಲಿಸಿದ್ದರು. ಅದರ ಬೆನ್ನಲ್ಲೇ, ಬಿಹಾರ ಶಾಸಕರೂ ಅದೇ ರೀತಿ ಹೇಳಿಕೆ ನೀಡಿದ್ದಾರೆ.