ಮುಂಬೈ: ಕೆಲ ತಿಂಗಳಿನಿಂದ ನಷ್ಟ ಅನುಭವಿಸುತ್ತಿದ್ದ ಹೂಡಿಕೆದಾರರು ಇವತ್ತು ಒಂದೇ ದಿನ 7 ಲಕ್ಷ ಕೋಟಿ ರೂ. ಹಣವನ್ನು ಗಳಿಸಿದ್ದಾರೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಇಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ದಶಕದ ಬಳಿಕ ಭಾರೀ ಏರಿಕೆಯಾಗಿದ್ದರಿಂದ ಹೂಡಿಕೆದಾರರು ಭರ್ಜರಿ ಲಾಭಗಳಿಸಿದ್ದಾರೆ.
ಕುಸಿತ ಹಾದಿಯಲ್ಲಿರುವ ದೇಶದ ಆರ್ಥಿಕತೆಗೆ ಇವತ್ತು ಕೇಂದ್ರ ಸರ್ಕಾರ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಿಯ ಕಂಪನಿಗಳ ಮೇಲಿನ ಎಲ್ಲಾ ಸೆಸ್ ಒಳಗೊಂಡಂತೆ ಕಾರ್ಪೋರೇಟ್ ತೆರಿಗೆಯನ್ನು ಶೇ.34.94ರಿಂದ ಶೇ. 25.17ಕ್ಕೆ ಇಳಿಸಿದೆ. ಹೆಚ್ಚು ಕಡಿಮೆ ಶೇ. 10ರಷ್ಟು ಕಾರ್ಪೋರೇಟ್ ತೆರಿಗೆ ಇಳಿಕೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಿಂದಲೇ ಅನ್ವಯವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
Advertisement
Advertisement
ಈ ಬೆನ್ನಲ್ಲೇ ನಿರಂತರ ನಷ್ಟ ಅನುಭವಿಸುತ್ತಿದ್ದ ಷೇರು ಪೇಟೆಯಲ್ಲಿ ಲಾಭದ ಹೊಳೆಯೇ ಹರಿಯಿತು. ಷೇರುಪೇಟೆ ಸೂಚ್ಯಂಕ ಲಾಭಾಂಶದಲ್ಲಿ ದಶಕದ ಬಳಿಕ ಹೊಸ ದಾಖಲೆ ಬರೆಯಿತು. ಹಿಂದೆಂದೂ ಕಾಣದ ರೀತಿಯಲ್ಲಿ ಮುಂಬೈ ಷೇರುಪೇಟೆ ಒಂದೇ ದಿನ 2,000 ಅಂಶಗಳಿಗೂ ಹೆಚ್ಚು ಏರಿಕೆ ಕಂಡಿತು. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಕೂಡ ಏರಿಕೆಯಲ್ಲಿ ಮುಳುಗೆದ್ದಿತು. ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಬೆನ್ನಲ್ಲೇ ಬಿಎಸ್‍ಇ ಮಾರ್ಕೆಟ್ ಮೌಲ್ಯ 143.45 ಲಕ್ಷ ಕೋಟಿಗೆ ಜಿಗಿಯಿತು. ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿಗೂ ಹೆಚ್ಚು ಏರಿಕೆ ಕಂಡಿತು.
Advertisement
ಎಷ್ಟು ಏರಿಕೆ ಆಯ್ತು?
ಸೆನ್ಸೆಕ್ಸ್ ಗುರುವಾರ 36,093.43 ಅಂಶಗಳಲ್ಲಿ ಮುಕ್ತಾಯಗೊಂಡರೆ ಇಂದು 1,921.25 (ಶೇ.5.32) ಅಂಶಗಳ ಏರಿಕೆ ಕಂಡು 38,014.62 ಅಂಶಗಳಲ್ಲಿ ಕೊನೆಗೊಂಡಿತು. ನಿಫ್ಟಿ ನಿನ್ನೆ 10,704.80 ಅಂಶಗಳಲ್ಲಿ ಕೊನೆಯಾಗಿದ್ದರೆ ಇಂದು 569.40(ಶೇ.5.32) ಅಂಶ ಏರಿಕೆಯಾಗಿ 11,274.20 ಅಂಶಗಳಲ್ಲಿ ಮುಕ್ತಾಯವಾಯಿತು.
Advertisement
ಈ ಹಿಂದೆ ಸೆನ್ಸೆಕ್ಸ್ 2009ರ ಮೇ 18 ರಂದು 2,111 ಅಂಶ ಏರಿಕೆ ಕಂಡಿದ್ದು ಇದು ಈವರೆಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಏರಿಕೆಯಾಗಿದೆ. ನಿಫ್ಟಿ 2009ರ ಮೇ 18 ರಂದು 713 ಅಂಶಗಳ ಏರಿಕೆ ಕಂಡಿತ್ತು.
ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಏನು?
ಗೋವಾದ ಪಣಜಿಯಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಿಯ ಕಂಪೆನಿಗಳಿಗೆ ವಿಧಿಸುತ್ತಿದ್ದ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೊಸ ಸ್ಥಳೀಯ ಸಂಸ್ಥೆಗಳಿಗೂ ಕಾರ್ಪೋರೇಟ್ ಮಾದರಿಯಲ್ಲಿ ತೆರಿಗೆಯಲ್ಲಿ ವಿನಾಯಿತಿ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಶೇ.30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ.22.2ಕ್ಕೆ ಇಳಿಸಲಾಗಿದೆ. ಈ ಹಿಂದೆ ಕಾರ್ಪೋರೇಟ್ ತೆರಿಗೆ, ಸೆಸ್, ಸಚಾರ್ಜ್ ಸೇರಿ ಶೇ.35 ಆಗುತಿತ್ತು. ಈಗ ಇದೆಲ್ಲ ಸೇರಿ ತೆರಿಗೆ ಶೇ.25.2ಕ್ಕೆ ಇಳಿಕೆಯಾಗಿದೆ. ಈ ತೆರಿಗೆ ದರ ಈ ವರ್ಷದ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.
ತೆರಿಗೆ ಕಡಿತಗೊಳಿಸಿ ಘೋಷಣೆ ಮಾಡಿದ ಬಳಿಕ ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ನೆರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉದ್ಯೋಗಾವಕಾಶ ಹಾಗೂ ಆರ್ಥಿಕ ಚೇತರಿಕೆಗೆ ಸ್ಫೂರ್ತಿ ನೀಡಲಿದೆ ಎಂದು ತಿಳಿಸಿದರು.