ಬೆಂಗಳೂರು: ಸ್ಯಾಂಡಲ್‍ವುಡ್ ಮೇಲೆ ಅತಿ ದೊಡ್ಡ ಐಟಿ ದಾಳಿ ನಡೆದಿದೆ. ಬೆಳ್ಳಂಬೆಳ್ಳಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ಕನ್ನಡದ ಹಲವು ಕಲಾವಿದರು, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳ್ಳಂಬೆಳಗ್ಗೆ ಇಂದು 50ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆದಿದ್ದು, 200ಕ್ಕೂ ಹೆಚ್ಚು ಅಧಿಕಾರಿಗಳು ಕಲಾವಿದರ, ನಿರ್ಮಾಪಕರ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
‘ಕೆಜಿಎಫ್’ ಸಕ್ಸಸ್ ಗುಂಗಿನಲ್ಲಿದ್ದ ನಟ ಯಶ್ ಅವರಿಗೆ ಐಟಿ ಶಾಕ್ ನೀಡಿದೆ. ಬನಶಂಕರಿ ಮೂರನೇ ಹಂತದಲ್ಲಿರುವ ಯಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಇನ್ನೋವಾ ಗಾಡಿಯಲ್ಲಿ ನಾಲ್ವರು ಅಧಿಕಾರಿಗಳು ಬಂದು ಮನೆ ಪರಿಶೀಲನೆ ಮಾಡುತ್ತಿದ್ದಾರೆ. ಮನೆಯಲ್ಲಿ ತಂದೆ-ತಾಯಿ ಸಮ್ಮುಖದಲ್ಲಿ ಐಟಿ ಅಧಿಕಾರಿಗಳು ಮುಂಜಾನೆಯಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜೊತೆಯಲ್ಲೇ ಮಲ್ಲೇಶ್ವರಂನಲ್ಲಿರುವ ರಾಧಿಕಾ ಪಂಡಿತ್ ಅವರ ತಂದೆಯ ನಿವಾಸ ಮತ್ತು ಯಶ್ ಸಹೋದರಿ ಮನೆ ಮೇಲೂ ದಾಳಿ ನಡೆದಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್- ಪುನೀತ್, ಯಶ್ ಸೇರಿದಂತೆ ನಿರ್ಮಾಪಕರ ಮನೆ ಮೇಲೆ ದಾಳಿ
ಸದಾಶಿವ ನಗರದಲ್ಲಿರುವ ಪುನೀತ್ ರಾಜ್‍ಕುಮಾರ್, ನಟಸಾರ್ವಭೌಮ ನಿರ್ಮಾಪಕರಾಗಿರುವ ರಾಕ್ ಲೈನ್ ವೆಂಕಟೇಶ್ ನಿವಾಸ, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ನಿವಾಸದ ಮೇಲೂ ದಾಳಿ ನಡೆದಿದೆ. ನಟರಾದ ಶಿವರಾಜ್‍ಕುಮಾರ್, ಸುದೀಪ್ ನಿವಾಸದ ಮನೆ ಮೇಲೂ ಐಟಿ ದಾಳಿ ನಡೆದಿದೆ.
ವಿಲನ್ ಚಿತ್ರದ ನಿರ್ಮಾಪಕ, ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಿ.ಆರ್. ಮನೋಹರ್ ಮೇಲೆ ನಡೆದ ಎರಡನೇ ದಾಳಿ ಇದಾಗಿದ್ದು, ವಿಲನ್ ಚಿತ್ರ ಘೋಷಣೆಯಾದ ಬಳಿಕ ಈ ಹಿಂದೆ ಐಟಿ ದಾಳಿ ನಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv