ಕಾರವಾರ: ಕಾರವಾರ ಸೇರಿದಂತೆ ಕರ್ನಾಟಕದ ಬೇರೆ ಜಿಲ್ಲೆಯ ರೋಗಿಗಳಿಗೆ ಗೋವಾ ಸರ್ಕಾರ ಉಚಿತ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಶಾಕ್ ನೀಡಿದೆ.
ಗೋವಾ ರಾಜ್ಯದ ನಾಲ್ಕು ಆಸ್ಪತ್ರೆಗಳಲ್ಲಿ ಜನವರಿ ಮೊದಲ ದಿನದಿಂದಲೇ ಶುಲ್ಕ ಪಡೆಯಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಪ್ರಮುಖವಾಗಿ ಕರ್ನಾಟಕದಿಂದ ಗೋವಾದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾದ 80 ಜನ ಹೊರ ರೋಗಿಗಳನ್ನು ದಾಖಲಿಸಿಕೊಂಡಿದ್ದು, ಪ್ರತಿ ರೋಗಿಗಳಲ್ಲಿಯೂ ಶುಲ್ಕ ವಸೂಲಿ ಮಾಡಿದೆ. ಹೊರ ರಾಜ್ಯದಿಂದ ಬಂದ ರೋಗಿಗಳು ಇಷ್ಟು ಶುಲ್ಕ ಕಟ್ಟಲೇಬೇಕಾಗಿದೆ. ಹೊರ ರೋಗಿಗಳಾಗಿ ನೊಂದಾಯಿಸಿಕೊಳ್ಳಲು 50 ರೂ ಗಳಿಂದ 100 ರೂ ಗಳಿಗೆ ಹೆಚ್ಚಳ ಮಾಡಲಾಗಿದೆ.
Advertisement
ತುರ್ತು ಪರಿಸ್ಥಿತಿಯಲ್ಲಿ ಬಂದವರೂ ಕಡ್ಡಾಯವಾಗಿ ಹಣ ಕಟ್ಟಬೇಕು. ಇನ್ನು ಉಚಿತ ಸೇವೆ ಪಡೆಯುತ್ತಿದ್ದ ಕರ್ನಾಟಕದ ಕಾರವಾರದ ಜನರಿಗೂ ಬಿಸಿ ತಟ್ಟಿದೆ. ಸ್ಕ್ಯಾನಿಂಗ್, ಇಸಿಜಿ ಸೇರಿದಂತೆ ಪ್ರಮುಖ ಸೇವೆಗಳಿಗೂ ಶುಲ್ಕ ವಿಧಿಸಲಾಗಿದೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಜೋಯಿಡಾ, ಹಳಿಯಾಳ ಸೇರಿದಂತೆ ಕರ್ನಾಟಕದ ಗಡಿಭಾಗದ ಜನರು ಈ ಭಾಗದಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿರದ ಕಾರಣ ಗೋವಾ ರಾಜ್ಯದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುತಿದ್ದರು. ಆದ್ರೆ ಗೋವಾ ಸರ್ಕಾರ ಹೊಸ ವರ್ಷದಲ್ಲಿಯೇ ಕರ್ನಾಟಕದ ಗಡಿಭಾಗದ ಜನರಿಗೆ ಮಹದಾಯಿ ನಂತರ ಮತ್ತೊಂದು ಶಾಕ್ ನೀಡಿದೆ.
Advertisement
Advertisement
ಗೋವಾದಲ್ಲೇ ಯಾಕೆ ಚಿಕಿತ್ಸೆ?: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಅಪಘಾತ ಹಾಗೂ ಕೆಲವು ರೋಗಗಳಿಗೆ ಚಿಕಿತ್ಸೆ ನೀಡಲು ಉಪಕರಣಗಳಾಗಲಿ ತಜ್ಞ ವೈದ್ಯರಾಗಲಿ ಇಲ್ಲ. ಇನ್ನು ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗಿಂತ ಕೆಳಮಟ್ಟದ ವೈದ್ಯಕೀಯ ಸೇವೆ ನೀಡುತ್ತಿವೆ. ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದ್ದರೂ ಇರಬೇಕಾದ ಸವಲತ್ತುಗಳು ರೋಗಿಗಳಿಗೆ ಸಿಗುತ್ತಿಲ್ಲ. ಈ ಕಾರಣದಿಂದ ಈ ಭಾಗದ ಜನರು ನೆರೆಯ ಗೋವಾದ ಪಣಜಿಯಲ್ಲಿರುವ ಬಾಂಬೋಲಿಂ ಆಸ್ಪತ್ರೆಗೆ ಹೋಗುತ್ತಾರೆ.
Advertisement
ಕರ್ನಾಟಕದಿಂದ ಗೋವಾ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದಾಗಿ ಗೋವಾ ಜನರಿಗೆ ಆಸ್ಪತ್ರೆಯ ಸವಲತ್ತುಗಳು ಸಿಗುವುದರಲ್ಲಿ ತೊಂದರೆಯಾಗುತ್ತಿತ್ತು. ಅಲ್ಲದೇ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಇದನ್ನು ತಡೆಯಲು ಬಿಜೆಪಿ ನೇತೃತ್ವದ ಮನೋಹರ್ ಪರಿಕ್ಕರ್ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕಳೆದ ಮೂರು ದಿನಗಳಿಂದ ಕರ್ನಾಟಕದಿಂದ ಹೊರ ರೋಗಿಗಳು ಹಾಗೂ ವಿವಿಧ ಶಸ್ತ್ರ ಚಿಕಿತ್ಸೆಗಾಗಿ ಬಂದವರಲ್ಲಿ ಶುಲ್ಕ ವಸೂಲಿ ಮಾಡಲಾಗಿದ್ದು, ಈಗಾಗಲೇ ಎರಡೂವರೆ ಲಕ್ಷ ರುಪಾಯಿಗಳು ಜಮಾ ಆಗಿದೆ ಎಂದು ಬಾಂಬೋಲಿಂ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಶಿವಾನಂದ ಬಾಂದೇಕರ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪ್ರತಿಕ್ರಿಯಿಸಿದ್ದು, ಹೊರ ರಾಜ್ಯದಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾರವಾರ ಭಾಗದಿಂದ ಬರುವ ಅಪಘಾತ ಮತ್ತು ತುರ್ತು ಸೇವೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ನಿರ್ಣಯ ಮರು ಪರಿಶೀಲಿಸಿ: ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ಹೊರ ರಾಜ್ಯದಿಂದ ಬರುವ ರೋಗಿಗಳಿಗೆ ಎಲ್ಲಾ ವೈದ್ಯಕೀಯ ಸೇವೆಗಳಿಗೆ ಪ್ರತ್ಯೇಕ ಶುಲ್ಕ ಪಡೆಯುವ ನಿರ್ಣಯ ಹಿಂಪಡೆಯಬೇಕೆಂದು ಮನವಿ ಮಾಡಲಾಗಿದೆ. ಕಾರವಾರ, ಜೋಯಿಡಾ, ಮಹಾರಾಷ್ಟ್ರ, ಸಿಂಧುದುರ್ಗದ ಜನತೆಯ ವತಿಯಿಂದ ವಕೀಲ ಆರ್.ವಿ.ನಾಯ್ಕರವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ವಿರೋಧ ಪಕ್ಷದ ನಾಯಕ ಚಂದ್ರಕಾಂತ್ ಕವಳೇಕರ್ ಈ ಮನವಿಯನ್ನು ಸಲ್ಲಿಸಿದ್ದಾರೆ.