ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವರ ತಾಯಿ ಬಂದಾಗ ಶೈನ್ ಶೆಟ್ಟಿ ಮೇಲೆ ಗರಂ ಆಗಿದ್ದರು. ಈ ಬಗ್ಗೆ ಶೈನ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಪ್ರತಿಕ್ರಿಯಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಶೈನ್ ಯಾವಾಗಲೂ ದೀಪಿಕಾ ಹಿಂದೆ ತಿರುಗಾಡುತ್ತಾ ಅವರನ್ನು ರೇಗಿಸುತ್ತಿದ್ದರು. ದೀಪಿಕಾ ಕೂಡ ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಶೈನ್ ಹಾಗೂ ದೀಪಿಕಾ ಅವರನ್ನು ನೋಡಿದ ಪ್ರೇಕ್ಷಕರು ಇಬ್ಬರು ಮದುವೆ ಆಗುತ್ತಾರೆ ಎಂದು ಮಾತನಾಡಲು ಶುರು ಮಾಡಿದ್ದರು. ಇದರಿಂದ ಬೇಸತ್ತ ದೀಪಿಕಾ ಅವರ ತಾಯಿ ಬಿಗ್ ಬಾಸ್ ಮನೆಗೆ ಹೋಗಿದ್ದಾಗ ಶೈನ್ ಅವರ ಬಳಿ ಸರಿಯಾಗಿ ಮಾತನಾಡಿರಲಿಲ್ಲ.
ಈ ಬಗ್ಗೆ ಬಿಗ್ ಮನೆಯಿಂದ ಹೊರ ಬಂದ ಬಳಿಕ ಪ್ರತಿಕ್ರಿಯೆ ನೀಡಿದ ಶೈನ್, ಈ ವಿಷಯ ಇಷ್ಟು ದೊಡ್ಡ ಸುದ್ದಿ ಆಗುತ್ತದೆ ಎಂದು ನಾನು ತಿಳಿದಿರಲಿಲ್ಲ. ಈ ವಿಚಾರವಾಗಿ ದೀಪಿಕಾ ಅವರ ತಾಯಿ ಕೋಪ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ತಮ್ಮ ಮಗಳಿಗೆ ಯಾವುದಾದರೂ ಹುಡುಗ ರೇಗಿಸುತ್ತಿದ್ದರೆ ಅವರ ತಂದೆ-ತಾಯಿಗೆ ಕೋಪ ಬರುವುದು ಸಾಮಾನ್ಯ. ಹಾಗೆಯೇ ದೀಪಿಕಾ ಅವರ ತಾಯಿಗೂ ಕೋಪ ಬಂದಿದೆ. ಇದರಲ್ಲಿ ದೀಪಿಕಾ ಅವರ ತಾಯಿಯವರದ್ದು ಯಾವುದೇ ತಪ್ಪಿಲ್ಲ. ನನ್ನದೇ ತಪ್ಪು ಎಂದು ಶೈನ್ ತಿಳಿಸಿದ್ದಾರೆ.
ಈ ಹಿಂದೆ ದೀಪಿಕಾ ತಾಯಿ, ಶೈನ್ ಅವರ ಬಳಿ ವರ್ತಿಸಿದ್ದ ರೀತಿ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಈ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಹೀಗಾಗಿ ಸ್ವತಃ ದೀಪಿಕಾ ತಾಯಿ ಈ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಶೈನ್ ಮೇಲೆ ಸ್ವಲ್ಪ ಕೋಪ ಇತ್ತು. ಹಾಗಾಗಿ ನಾನು ಬಿಗ್ ಬಾಸ್ ಮನೆಯಲ್ಲಿ ಆ ರೀತಿ ನಡೆದುಕೊಂಡೆ. ತಮ್ಮ ಮಗಳಿಗೆ ಈ ರೀತಿ ಆದರೆ ಯಾವ ತಾಯಿ ತಾನೇ ಸುಮ್ಮನೆ ಇರುತ್ತಾರೆ ಎಂದು ಹೇಳಿ ನಾನು ತಪ್ಪ ಮಾಡಿದೆ ಎಂದು ಕಣ್ಣೀರು ಹಾಕಿದ್ದರು. ಸ್ವಲ್ಪ ದಿನದ ಬಳಿಕ ಈ ವಿಷಯ ಅಲ್ಲಿಗೆ ನಿಂತು ಹೋಗಿತ್ತು.