ಪೊಲೀಸ್ ಅಧಿಕಾರಿಯಾಗಿ ಅಚ್ಚರಿ ಮೂಡಿಸಲಿದ್ದಾರೆ ಬಿಗ್ ಬಾಸ್ ರೂಪೇಶ್ ಶೆಟ್ಟಿ!

Public TV
3 Min Read
Adhipatra 1

ತುಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಟನಾಗಿ, ನಿರ್ಮಾಪಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವವರು ರೂಪೇಶ್ ಶೆಟ್ಟಿ. ಕನ್ನಡ ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಅವರೀಗ ಅಧಿಪತ್ರದ ನಾಯಕನಾಗಿ, ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ರೆಡಿಯಾಗಿದ್ದಾರೆ. ‘ಬಿಗ್‌ ಬಾಸ್‌ ಕನ್ನಡ 9’ರ (BBK 9) ವಿನ್ನರ್ ಆಗಿದ್ದವರು ರೂಪೇಶ್ ಶೆಟ್ಟಿ. ಆ ಶೋನ ನಂತರದಲ್ಲಿ ಅವರು ನಾಯಕನಾಗಿ ನಟಿಸಿರುವ ಮೊದಲ ಚಿತ್ರವಾಗಿಯೂ ಅಧಿಪತ್ರ ಗಮನ ಸೆಳೆದಿದೆ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಅವರ ಪಾತ್ರದ ಸ್ಪಷ್ಟವಾದ ಸುಳಿವುಗಳು ಪ್ರೇಕ್ಷಕರನ್ನು ತಲುಪಿಕೊಂಡಿವೆ. ಈ ಮೂಲಕ ಮೂಡಿಕೊಂಡಿರೋ ಅಗಾಧ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ವಾರ ಅಂದರೆ, ಫೆಬ್ರವರಿ 7ರಂದು ‘ಅಧಿಪತ್ರ’ (Adhipatra) ಅದ್ದೂರಿಯಾಗಿ ತೆರೆಗಾಣಲಿದೆ.

Adhipatra Trailer released Roopesh Shetty Jhanvi Kannnada Cinema 2

ರೂಪೇಶ್ ಶೆಟ್ಟಿ (Roopesh Shetty)  ಬಿಗ್ ಬಾಸ್ ಶೋ ಮುಗಿಸಿಕೊಂಡು ಬಂದ ನಂತರ ಅವರ ಮುಂಬರುವ ಸಿನಿಮಾ ಯಾವುದು ಅಂತೊಂದು ಕೌತುಕ ಕನ್ನಡ ಸಿನಿಮಾಸಕ್ತರಲ್ಲಿತ್ತು. ಆದರೆ, ಆ ಶೋ ಮುಗಿದು ಆರೇಳು ತಿಂಗಳು ಕಳೆದರೂ ಸಹ ಆ ಬಗ್ಗೆ ಯಾವುದೇ ಸೂಚನೆಗಳು ಸಿಕ್ಕಿರಲಿಲ್ಲ. ಯಾಕೆಂದರೆ, ಬಿಗ್ ಬಾಸ್ ಶೋ ಮುಗಿಸಿಕೊಂಡು ಹೊರಬಂದ ನಂತರದಲ್ಲಿ ರೂಪೇಶ್ ‘ಸರ್ಕಸ್’ ಎಂಬ ತುಳು ಸಿನಿಮಾದ ನಿರ್ದೇಶನ, ನಿರ್ಮಾಣದಲ್ಲಿ ಬ್ಯುಸಿಯಾಗಿದ್ದರು. ಆ ಚಿತ್ರ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದೆ. ಹಾಗೆ ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು, ದೊಡ್ಡ ಮಟ್ಟದಲ್ಲಿ ಗೆಲುವು ದಕ್ಕಿಸಿಕೊಂಡ ಬೆನ್ನಲ್ಲಿಯೇ ರೂಪೇಶ್ ಶೆಟ್ಟಿ ಒಪ್ಪಿಕೊಂಡಿದ್ದ ಚಿತ್ರ ಅಧಿಪತ್ರ.

Adhipatra 2

ಅಷ್ಟಕ್ಕೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ವಿನ್ನರ್ ಆಗಿ ಹೊರ ಹೊಮ್ಮುತ್ತಲೇ ಕನ್ನಡ ಚಿತ್ರರಂಗದ ಚಿತ್ತ ಅವರತ್ತ ಹೊರಳಿಕೊಂಡಿತ್ತು. ಅನೇಕರು ಅವರಿಗೆಂದೇ ಕಥೆ ಸಿದ್ಧಪಡಿಸಿಕೊಂಡು ಸಂಪರ್ಕಿಸಲಾರಂಭಿಸಿದ್ದರು. ಸಿನಿಮಾವೊಂದನ್ನು ಎಲ್ಲ ಆಯಾಮಗಳಲ್ಲಿಯೂ ಪರಾಮರ್ಶಿಸುವ ಕಲೆ ಸಿದ್ಧಿಸಿಕೊಂಡಿರೋ ರೂಪೇಶ್ ಅವರಿಗೆ, ತಮ್ಮ ಮುಂಬರುವ ಪ್ರಾಜೆಕ್ಟಿನ ಬಗ್ಗೆ ಸ್ಪಷ್ಟವಾದ ಕಲ್ಪನೆಯಿತ್ತು. ಅದರ ಸುತ್ತ ಹರಳುಗಟ್ಟಿಕೊಂಡಿದ್ದ ನಿರ್ಧಾರವೂ ಬಲವಾಗಿತ್ತು. ಒಂದಷ್ಟು ಆಫರ್‌ಗಳು ಆ ಮಟ್ಟಕ್ಕೆ ತೃಪ್ತಿ ಕೊಡದ ಕಾರಣದಿಂದ ಒಂದೊಳ್ಳೆ ಕಥೆಗಾಗಿ ಅರಸುತ್ತಿದ್ದ ರೂಪೇಶ್‌ ಮುಂದೆ ಬಂದವರು ನವ ನಿರ್ದೇಶಕರ ಚಯನ್ ಶೆಟ್ಟಿ.

Adhipatra 3

ಹೊಸಬರು ಇದ್ದಾರೆ ಎಂದರೆ ಅಲ್ಲಿ ಹೊಸತನ ಇದ್ದೇ ಇರುತ್ತದೆಂಬ ನಂಬಿಕೆ ಕನ್ನಡ ಚಿತ್ರರಂಗ, ಪ್ರೇಕ್ಷಕ ವಲಯದಲ್ಲಿದೆ. ಚಯನ್ ರೂಪೇಶ್ ಅವರಿಗೆ ಹೇಳಿದ ಕಥೆ ಕೂಡಾ ಆ ಮಾತನ್ನು ಮತ್ತೆ ಸಾಬೀತುಗೊಳಿಸುವಂತಿತ್ತು. ಆ ಕ್ಷಣವೇ ಒಪ್ಪಿಗೆ ಸೂಚಿಸಿದ್ದ ರೂಪೇಶ್ ಶೆಟ್ಟಿ ಅದಕ್ಕಾಗಿ ತಯಾರಿ ಆರಂಭಿಸಿದ್ದರು. ಅದು ಹೇಳಿಕೇಳಿ ಪೊಲೀಸ್ ಪಾತ್ರ. ಅದರ ಸಂಪೂರ್ಣ ಗುಣಲಕ್ಷಣಗಳನ್ನು ಮನನ ಮಾಡಿಕೊಂಡು ತಯಾರಾಗೋದರ ಜೊತೆಗೆ, ಫಿಟ್ನೆಸ್ ಅನ್ನು ಸಂಭಾಳಿಸಿಕೊಳ್ಳುವ ಸವಾಲೂ ಅವರ ಮುಂದಿತ್ತು. ಅದೆಲ್ಲವನ್ನೂ ಮುಗಿಸಿಕೊಂಡು ಚಿತ್ರೀಕರಣ ಪೂರೈಸಿಕೊಂಡಿರುವ ರೂಪೇಶ್ ಶೆಟ್ಟಿ ಒಟ್ಟಾರೆ ಸಿನಿಮಾ ಮೂಡಿ ಬಂದಿರುವ ರೀತಿಯನ್ನು ಕಂಡು ಖುಷಿಗೊಂಡಿದ್ದಾರೆ. ‘ಅಧಿಪತ್ರ’ ಪ್ರೇಕ್ಷಕರಿಗೆಲ್ಲ ಖಂಡಿತವಾಗಿಯೂ ಹಿಡಿಸುತ್ತದೆಂಬ ಗಾಢ ನಂಬಿಕೆಯೂ ಅವರಲ್ಲಿದೆ.

 

View this post on Instagram

 

A post shared by PUBLiC TV (@publictv)


‘ಬಿಗ್ ಬಾಸ್’ ನಂತರದಲ್ಲಿ ಅಧಿಪತ್ರದ (Adhipatra Film) ಮೂಲಕ ಕನ್ನಡ ಚಿತ್ರರಂಗದಲ್ಲಿ ರೂಪೇಶ್ ಶೆಟ್ಟಿಯವರ ಮತ್ತೊಂದು ಅಧ್ಯಾಯ ಪುಟ ತೆರೆದುಕೊಳ್ಳಲಿದೆ. ಈಗಾಗಲೇ ಎಲ್ಲೆಡೆಯಲ್ಲಿಯೂ ಈ ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಹಬ್ಬಿಕೊಂಡಿದೆ. ಒಂದೊಳ್ಳೆ ಕಥೆ, ಪ್ರತಿಭಾನ್ವಿತರ ಸಾಥ್, ಅನುಭವೀ ಕಲಾವಿದರು, ತಂತ್ರಜ್ಞರು ಮತ್ತು ನಿರ್ದೇಶಕ ಚಯನ್ ಶೆಟ್ಟಿಯ ಪ್ರತಿಭೆಯ ಕಾರಣದಿಂದ ಅಧಿಪತ್ರ ಕಳೆಗಟ್ಟಿಕೊಂಡಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ‘ಅಧಿಪತ್ರ’ ಫೆಬ್ರವರಿ 7ರಂದು ಬಿಡುಗಡೆಗೊಳ್ಳಲಿದೆ.

Share This Article