– ಬಿಗ್ ಬಾಸ್ ಮನೆಯಲ್ಲಿ ನಮ್ಮನ್ನು ಯುದ್ಧಕ್ಕೆ ಬಂದ ಶತ್ರುಗಳಂತೆ ನೋಡ್ತಾರೆ ಎಂದ ಅಶ್ವಿನಿ ಗೌಡ
ನಾನು ವಿನ್ನರ್ ಆಗುವ ನಿರೀಕ್ಷೆ ಹೆಚ್ಚಿತ್ತು. ಆದರೆ, 3ನೇ ಸ್ಥಾನಕ್ಕೆ ತೃಪ್ತಿ ಸಿಕ್ಕಿದೆ ಎಂದು ಬಿಗ್ ಬಾಸ್ ಸೀಸನ್ 12ರ ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ ಹೇಳಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಬಿಗ್ ಬಾಸ್ ಅನುಭವ ಸಖತ್ತಾಗಿತ್ತು. ದೊಡ್ಡ ಯುದ್ಧಕ್ಕೆ ಹೋಗಿ ಗೆದ್ದು ಬಂದಿದ್ದೀನಿ ಅನ್ನುವಷ್ಟು ಖುಷಿ ನನಗಿದೆ. ವಿನ್ನರ್ ಆಗಲಿಲ್ಲ ಅನ್ನೋದನ್ನ ಅರಗಿಸಿಕೊಳ್ಳೋಕೆ ಕಷ್ಟ ಆಗ್ತಿದೆ. ಆದರೆ, ಹೊರಗಡೆ ಜನರ ಪ್ರೀತಿ ನೋಡಿ ತುಂಬಾ ಖುಷಿಯಾಗ್ತಿದೆ ಎಂದು ತಿಳಿಸಿದ್ದಾರೆ.
ಮನುಷ್ಯನಿಗೆ ಯಾವತ್ತೂ ತೃಪ್ತಿ ಅನ್ನೋದು ಆಗಲ್ಲ. ನಾನು ವಿನ್ ಆಗಿದ್ರೂ ಬಹುಶಃ ತೃಪ್ತಿ ಇರ್ತಿತ್ತೋ ಏನೋ. ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳೋಣ. ಹೊರಗಡೆ ಬಂದಾಗ ಸಿಕ್ಕ ಜನರ ಪ್ರೀತಿ ನೋಡಿ ನಾನು ವಿನ್ ಆಗ್ಬೇಕಿತ್ತು ಅನ್ನಿಸ್ತು ಎಂದು ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯೊಳಗಡೆ ಹೋದಾಗ ನಮಗೇನು ಗೊತ್ತಿರಲ್ಲ. ಅಲ್ಲಿ ಯಾರೂ ನಮ್ಮವರಲ್ಲ. ಟಾಸ್ಕ್‌ಗಳನ್ನು ಆಡಿ ಬಂದಿರ್ತೀವಿ. ನೀರು.. ನೀರು.. ಅಂತ ಕೇಳಿದ್ರೆ ಯಾರೂ ಕೊಡಲ್ಲ. ಎಲ್ಲರೂ ನಮ್ಮನ್ನು ಯುದ್ಧಕ್ಕೆ ಬಂದ ಶತ್ರುಗಳಂತೆ ನೋಡ್ತಿರ್ತಾರೆ. ಹಾಗಿರುತ್ತೆ ಬಿಗ್ ಬಾಸ್ ಮನೆ. ಅಲ್ಲಿ ನೀವು ಎಲ್ಲವನ್ನೂ ಜೀರ್ಣಿಸಿಕೊಂಡು, ಪ್ರತಿಯೊಬ್ಬರನ್ನೂ ಎದುರುಹಾಕಿಕೊಂಡು ಒಂಟಿಯಾಗಿ ಬದುಕೋದು ಅದೇ ನಿಜವಾದ ಜೀವನ. ಅಲ್ಲಿವರೆಗೂ ಗೆದ್ದು ಫಿನಾಲೆ ತನಕ ಬಂದಿದ್ದೀನಿ ಅಂದ್ರೆ, ಕಪ್ ಗೆದ್ದಷ್ಟೇ ಖುಷಿ ನನಗಿದೆ ಎಂದು ಹೇಳಿದ್ದಾರೆ.

