ಕಾರ್ತಿಕ್ (Karthik) ಅವರ ಬಿಗ್‌ಬಾಸ್ (Bigg Boss Kannada) ಜರ್ನಿಯಲ್ಲಿ ವಿನಯ್ ಗೌಡ (Vinay)ಅವರ ಪಾಲು ದೊಡ್ಡದಿದೆ. ಬಿಗ್‌ಬಾಸ್ ಷೋಗಿಂತಲೂ ಮೊದಲಿನಿಂದ, ಅಂದರೆ ಕಳೆದ ಹತ್ತು ವರ್ಷಗಳಿಂದ ಸ್ನೇಹಿತರಾಗಿದ್ದ ವಿನಯ್ ಮತ್ತು ಕಾರ್ತೀಕ್ ಸ್ನೇಹಿತರು. ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ಭೇಟಿಯಾದಾಗ ವಿನಯ್, ‘ಫಿನಾಲೆ ದಿನ ಸುದೀಪ್ ಅವರ ಒಂದು ಕೈಯಲ್ಲಿ ನಿನ್ನ ಕೈ ಇದ್ದರೆ, ಇನ್ನೊಂದು ಕೈಯಲ್ಲಿ ನನ್ನ ಕೈ ಇರಬೇಕು’ ಎಂದು ಕಾರ್ತಿಕ್ ಅವರ ಹೆಗಲು ತಟ್ಟಿದ್ದರು. ಹಾಗೆಂದು ಅವರು ಎಂದು ಹೆಗಲೆಣೆಯಾಗಿ ಆಡಿಲ್ಲ. ಸದಾ ಎದುರಾಳಿಗಳಾಗಿ ಒಬ್ಬರಿಗೊಬ್ಬರು ಕೌಂಟರ್ ಕೊಟ್ಟುಕೊಂಡೇ ಆಡಿದರು. ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿದ್ದೂ ಇದೆ.
ಹಳ್ಳಿ ಟಾಸ್ಕ್ ಆಗುವಾಗ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ತಾರಕಕ್ಕೇರಿತ್ತು. ಸಂಗೀತಾ ಮತ್ತು ವಿನಯ್ ನಡುವಿನ ಜಗಳ ನಿಲ್ಲಿಸುವಲ್ಲಿಯೂ ಕಾರ್ತಿಕ್ ಮುಖ್ಯಪಾತ್ರ ವಹಿಸಿದ್ದರು. ನಂತರ ರಾಕ್ಷಸರು ಗಂಧರ್ವರು ಟಾಸ್ಕ್‌ನಲ್ಲಿ ಇದು ಇನ್ನೊಂದು ಹಂತಕ್ಕೆ ಹೋಗಿತ್ತು. ವಿನಯ್ ರಾಕ್ಷಸನಾದಾಗ, ಕಾರ್ತಿಕ್ ಮುಖಕ್ಕೆ ಹಿಟ್ಟು ಎರೆಚಿದ್ದು ಕಾರ್ತಿಕ್ ಸಹನೆಯನ್ನು ಕೆಣಕಿತ್ತು. ಅವರು ಕೋಪದಲ್ಲಿ ನೆಲಕ್ಕೆಸೆದ ಚಪ್ಪಲಿ ವಿನಯ್ ಮೇಲೆ ಹೋಗಿ ಬಿದ್ದಿತ್ತು. ಇದು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು.
ಇಷ್ಟೆಲ್ಲ ಆದರೂ ವಿನಯ್ ಜೊತೆಗಿನ ಕಾರ್ತಿಕ್ ಸ್ನೇಹಕ್ಕೆ ಕುಂದು ಬಂದಿಲ್ಲ. ಇತ್ತೀಚೆಗಷ್ಟೇ, ‘ನಿಮ್ಮ ಜೊತೆಗೆ ಫಿನಾಲೆಯಲ್ಲಿ ಇರುವ ಇನ್ನೊಬ್ಬ ಸ್ಪರ್ಧಿ ಯಾರಾಗಿರಬೇಕು?’ ಎಂಬ ಬಿಗ್‌ಬಾಸ್ ಪ್ರಶ್ನೆಗೆ ಕಾರ್ತಿಕ್ ಆರಿಸಿಕೊಂಡಿದ್ದು ವಿನಯ್ ಅವರ ಹೆಸರನ್ನೇ.
ಕಳೆದ ಕೆಲವು ವಾರಗಳ ಹಿಂದೆ ಕಾರ್ತಿಕ್ ನಮ್ರತಾ ನಡುವೆ ತಮಾಷೆಯ ಮಾತುಕತೆಗಳು ನಡೆಯುತ್ತಿದ್ದವು. ಕಾರ್ತಿಕ್, ನಮ್ರತಾ ಜೊತೆಗೆ ಡೇಟಿಂಗ್ ಹೋಗುವ ಟ್ರ್ಯಾಕ್ ತುಂಬ ವಾರಗಳಿಂದಲೂ ನಡೆಯುತ್ತಲೇ ಬಂದಿತ್ತು. ಹಲವು ಸಲ ಕಾರ್ತಿಕ್ ತಮಾಷೆಗಾಗಿ, ನಮ್ರತಾ ಜೊತೆಗೆ ಫ್ಲರ್ಟ್ ಮಾಡುತ್ತಿರುವಂತೆಯೇ ನಡೆದುಕೊಳ್ಳುತ್ತಿದ್ದರು. ಅದನ್ನು ನಮ್ರತಾ ಕೂಡ ಅಷ್ಟೇ ಹೆಲ್ದಿಯಾಗಿ ತೆಗೆದುಕೊಂಡು ಫ್ರಾಂಕ್ ಮಾಡುತ್ತಿದ್ದರು. ‘ಕಾರ್ತೀಕ್ ಕೈ ಹಿಡಿದುಕೊಂಡಾಗ ನನಗೇನೋ ಕಂಫರ್ಟ್ ಫೀಲ್ ಆಗುತ್ತದೆ. ನನಗೆ ಎಂದೂ ಅವರ ಟಚ್ ಬ್ಯಾಡ್ ಎನಿಸಿಲ್ಲ’ ಎಂದು ನಮ್ರತಾ ಹಲವು ಬಾರಿ ಹೇಳಿದ್ದರು.
ಆದರೆ ಈ ಎಲ್ಲದಕ್ಕೂ ಹೊಸದೇ ತಿರುವು ಬಂದಿದ್ದು, ಈ ಸೀಸನ್‌ನ ಹಳೆಯ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಬಂದಾಗ. ಒಂದೆಡೆ ಸ್ನೇಹಿತ್, ಮನೆಯೊಳಗೆ ಬಂದು ನಮ್ರತಾಳನ್ನು ನಿರ್ಲಕ್ಷಿಸಿದರು. ‘ನೀವು ಕಾರ್ತಿಕ್ ನಡೆಗಳು ಹೊರಗಡೆ ಅಗ್ಲಿಯಾಗಿ ಕಾಣಿಸುತ್ತಿವೆ’ ಎಂದು ಪದೇ ಪದೇ ಹೇಳಿದ್ದರು. ಕಾರ್ತೀಕ್‌ಗೆ ಕೂಡ, ‘ನಿಮ್ಮೊಳಗೊಬ್ಬ ಜಂಟಲ್‌ಮೆನ್ ನೋಡಿದ್ದೀನಿ. ಹಾಗೇ ಇರಿ’ ಎಂದಿದ್ದರು. ಸಿರಿ, ಕಾರ್ತಿಕ್ ಅವರನ್ನು ಪಕ್ಕಕ್ಕೆ ಕರೆದು ‘ನಮ್ರತಾ ಜೊತೆಗೆ ಹಾಗೆ ನಡೆದುಕೊಳ್ಳುವುದನ್ನು ಬಿಡು’ ಎಂದು ಬುದ್ಧಿ ಹೇಳಿದ್ದರು. ಇದು ತಮ್ಮ ನಡವಳಿಕೆ ಹೊರಗಿನಿಂದ ನೋಡುವವರಿಗೆ ಅಗ್ಲಿಯಾಗಿ ಕಾಣಿಸುತ್ತಿದೆ ಎಂದು ಅನಿಸುವಂತೆ ಆಯಿತು. ಅದು ಅವರನ್ನು ಸಾಕಷ್ಟು ಕುಗ್ಗಿಸಿತು ಕೂಡ.