– ಕಷ್ಟದಲ್ಲಿರೋರಿಗೆ ನೀವು ಕೊಡಬೇಕೆಂದಿದ್ದ ಹಣವನ್ನು ನಾನೇ ಕೊಡ್ತೀನಿ ಎಂದ ಕಿಚ್ಚ
‘ಬಿಗ್ ಬಾಸ್ ಕನ್ನಡ 11′ ರೋಚಕ ಹಂತದಲ್ಲಿದೆ. ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಆಸೆಯಲ್ಲಿದ್ದ ಉಗ್ರಂ ಮಂಜು ಅವರು ಎಲಿಮಿನೇಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಕೊನೆದಾಗಿ ಬಿಗ್ ಬಾಸ್ ವೇದಿಕೆಯಲ್ಲಿ ಮಾತನಾಡುವಾಗ, ತಮಗೆ ಬಹುಮಾನವಾಗಿ ಬಂದ ಹಣವನ್ನೆಲ್ಲ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹೋಗಿ ಕಿಚ್ಚ ಸುದೀಪ್ ಅವರಿಂದ ಕಿವಿ ಹಿಂಡಿಸಿಕೊಂಡರು.
Advertisement
ಬಿಗ್ ಬಾಸ್ ಮನೆಯಿಂದ ಟಾಪ್ 5 ಸ್ಪರ್ಧಿಯಾಗಿ ‘ಮಂಜಣ್ಣ’ ಹೊರಬಿದ್ದರು. ದೊಡ್ಮನೆಯಲ್ಲಿ ಮಂಜು ಆಟವನ್ನು ಸುದೀಪ್ ಅವರು ಕೊಂಡಾಡಿದರು. ‘ನೀವಿಲ್ಲದೇ ಬಿಗ್ ಬಾಸ್ 11 ಸೀಸನ್ ಅಪೂರ್ಣ ಆಗ್ತಿತ್ತು’ ಎನ್ನುವ ದೊಡ್ಡ ಕ್ರೆಡಿಟ್ ಅನ್ನು ಮಂಜುಗೆ ಕೊಟ್ಟರು.
Advertisement
ಐದನೇ ಸ್ಥಾನದಲ್ಲಿದ್ದ ಮಂಜುಗೆ ಅನೇಕ ಬಹುಮಾನಗಳು ಹರಿದುಬಂತು. ಎರಡು ಸಂಸ್ಥೆಯಿಂದ ಒಟ್ಟು 3 ಲಕ್ಷ ಹಣ ಬಂತು. ಮೊದಲು 2 ಲಕ್ಷ ರೂ. ಕ್ಯಾಶ್ ಪ್ರೈಸ್ ಸಿಕ್ಕಿತು. ಆದರೆ, ಆ ಹಣವನ್ನು ವಯಸ್ಸಾದ ತಾಯಂದಿರಿಗೆ ನೀಡುವುದಾಗಿ ಮಂಜು ವೇದಿಕೆಯಲ್ಲೇ ಘೋಷಿಸಿದರು. ಅವರ ತ್ಯಾಗಮಯಿ ಗುಣಕ್ಕೆ ಅಭಿಮಾನಿಗಳಿಂದ ಚಪ್ಪಾಳೆ ಸುರಿಮಳೆ ಹರಿಯಿತು.
Advertisement
ಮತ್ತೆ 1 ಲಕ್ಷ ರೂ. ಬಹುಮಾನ ಸಿಕ್ಕಿತು. ಆಗ, ‘ಇದು ಯಾರಿಗೆ’ ಎಂದು ಸುದೀಪ್ ಕಿಚಾಯಿಸಿದರು. ಆ ಹಣವನ್ನೂ ಊರಲ್ಲಿ ಯಾರಾದರು ರೈತರಿಗೆ ಸಹಾಯ ಮಾಡಿ ಅಪ್ಪ ಎಂದು ಮಂಜು ತಮ್ಮ ತಂದೆಗೆ ಹೇಳಿದರು. ತಕ್ಷಣ ತಡೆದ ಸುದೀಪ್ ಅವರು, ನಿಮ್ಮ ತಂದೆಯೇ ರೈತರು.. ನೀವೆ ಇಟ್ಟುಕೊಳ್ಳಿ ಸರ್ ಎಂದು ಮಂಜು ಅವರ ತಂದೆಗೆ ತಿಳಿಸಿದರು.
Advertisement
‘ದಾನ-ಧರ್ಮ ಬೇಕು, ದಡ್ಡತನ ಬೇಡ.. 2 ಲಕ್ಷ ಕೊಟ್ಟಾಯ್ತು. ಈಗ ಸ್ವಲ್ಪ ಸುಮ್ನಿರಿ’ ಎಂದು ಸುದೀಪ್ ಅವರು ತಡೆದರು. ಮಂಜು ಅವರು ಕೊಡಬೇಕು ಎಂದುಕೊಂಡಿದ್ದ 2 ಲಕ್ಷ ಹಣವನ್ನು ನಾನೇ ಸಹಾಯ ಮಾಡ್ತೀನಿ. ಗಿಫ್ಟ್ ಆಗಿ ಬಂದ ಹಣವನ್ನು ಗೌರವಪೂರ್ವಕವಾಗಿ ಇಟ್ಕೊಳ್ಳಿ ಎಂದು ಮಂಜುಗೆ ಸುದೀಪ್ ಮನವರಿಕೆ ಮಾಡಿದರು.
ಸಂಸ್ಥೆಯಿಂದ ಗೌರವಪೂರ್ವಕವಾಗಿ ಹಣ ನಿಮಗೆ ಬಂದಿದೆ. ಅದನ್ನು ನಿಮ್ಮ ತಂದೆ-ತಾಯಿಗೆ ಕೊಡಿ. ಕೊನೆಗೆ ಅವರಿಬ್ಬರು ಏನು ನಿರ್ಧಾರ ಮಾಡ್ತಾರೋ ಮಾಡ್ಲಿ ಎಂದು ಮಂಜುಗೆ ಕಿಚ್ಚ ಬುದ್ದಿಮಾತು ಹೇಳಿದರು. ಈ ವೇಳೆ, ಫ್ಯಾನ್ಸ್ ‘ಕಿಚ್ಚ.. ಕಿಚ್ಚ..’ ಎಂದು ಕೂಗಿ ಮೆಚ್ಚುಗೆ ವ್ಯಕ್ತಪಡಿಸಿದರು.