ಬೆಂಗಳೂರು: ಬಿಗ್ ಬಾಸ್ ಶೋ ಸ್ಪರ್ಧಿಯಾಗಿದ್ದಾಗಲೇ ತಮ್ಮ ಸ್ನೇಹಮಯ ವ್ಯಕ್ತಿತ್ವ, ಪರರ ಬಗೆಗಿನ ಕಾಳಜಿ ಮತ್ತು ಹೆಣ್ಣು ಮಕ್ಕಳನ್ನು ಗೌರವಿಸೋ ಮನಸ್ಥಿತಿಗಳ ಮೂಲಕ ಜನರ ಮನ ಗೆದ್ದಿದ್ದರು ಭುವನ್. ಇದೀಗ ಅವರು ರಾಂಧವ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಈ ಹಂತದಲ್ಲಿಯೇ ಜನ ಅವರನ್ನು ಆರಾಧಿಸುತ್ತಿರೋ ಪರಿ ನಿಜಕ್ಕೂ ಅಚ್ಚರಿದಾಯಕವಾಗಿದೆ. ಅದೆಷ್ಟೋ ಮಂದಿ ಭುವನ್ ಹೆಸರನ್ನೇ ತಮ್ಮ ಮಗುವಿಗೂ ಇಡುತ್ತಿದ್ದಾರೆ!
ತುಮಕೂರಿನಲ್ಲಿಯೂ ಇತ್ತೀಚೆಗೆ ಒಂದು ಮಗುವಿನ ನಾಮಕರಣ ಸಮಾರಂಭ ನೆರವೇರಿದೆ. ಆ ಮಗುವಿಗೂ ಭುವನ್ ಎಂದೇ ಹೆಸರಿಡಲಾಗಿದೆ. ವಿಶೇಷವೆಂದರೆ, ಈ ಮಗುವಿನ ನಾಮಕರಣ ಸಮಾರಂಭಕ್ಕೆ ಖುದ್ದು ಭುವನ್ ಅವರೇ ತೆರಳಿದ್ದಾರೆ. ತಮ್ಮದೇ ಹೆಸರಿನ ಮಗುವನ್ನೆತ್ತಿಕೊಂಡು ಮುದ್ದಾಡಿ ಹರಸಿ ಬಂದಿದ್ದಾರೆ.
ಇದು ನಿಜಕ್ಕೂ ಅಚ್ಚರಿ ಹುಟ್ಟಿಸುವಂಥಾ ವಿದ್ಯಮಾನ. ಹೀಗೆ ಜನ ತಮ್ಮ ಮಕ್ಕಳಿಗೇ ಭುವನ್ ಹೆಸರಿಡಲು ಪ್ರೇರೇಪಿಸಿರೋದು ಅವರ ವ್ಯಕ್ತಿತ್ವವೇ. ಸಾಮಾನ್ಯವಾಗಿ ಹೀರೋ ಆಗಿ ನೆಲೆ ಕಂಡುಕೊಂಡ ನಂತರವಷ್ಟೇ ಓರ್ವ ಕಲಾವಿದನ ಮೇಲೆ ಇಂಥಾ ಕ್ರೇಜ್ ಹುಟ್ಟಿಕೊಳ್ಳುತ್ತೆ. ಆದರೆ ಭುವನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ ಅದಾಗಲೇ ಭುವನ್ ರಿಯಲ್ ಹೀರೋ ಆಗಿ ಬಿಟ್ಟಿದ್ದಾರೆ.
ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಭುವನ್ ಅವರನ್ನು ಮುಖ್ಯ ನಾಯಕನನ್ನಾಗಿ ನೆಲೆಗಾಣಿಸೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಈ ಚಿತ್ರದ ವಿಶೇಷವಾದ ಹಾಡೊಂದು ಇಂದು ಕೇಳಲು ಸಿಗಲಿದೆ. `ಈ ಧರೆಯ ಸೊಬಗು ನಮ್ಮ ನಾಡು’ ಎಂಬ ಹಾಡು ಇಂದು ಸಂಜೆ ಆರು ಘಂಟೆಗೆ ಬಿಡುಗಡೆಯಾಗಲಿದೆ.