ಕೋಲಾರ: ಕಳೆದ ಕೆಲ ದಿನಗಳ ಹಿಂದೆ ಮದುವೆ ಮಂಟಪದಲ್ಲಿ ನಾಪತ್ತೆಯಾಗಿದ್ದ ವಧು-ವರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮದುವೆ ವೇಳೆ ನಾಪತ್ತೆಯಾಗಿದ್ದ ವರ ಗುರೇಶ್ ಇಂದು ಸಂಬಂಧಿ ಮಾನಸ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯೊಂದಿಗೆ ರಹಸ್ಯವಾಗಿ ಮದುವೆಯಾಗಿದ್ದಾರೆ.
ಇಬ್ಬರ ವಿವಾಹ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿಯ ಕೈವಾರ ಕ್ಷೇತ್ರದಲ್ಲಿ ನಡೆದಿದೆ. ಇದರೊಂದಿಗೆ ಮದುವೆ ಸಂಬಂಧ ನಡೆದ ಹೈಡ್ರಾಮದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ.
ಏನಿದು ಘಟನೆ?: ಕಳೆದ ಜನವರಿ 26 ರಂದು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮಾಲೂರು ತಾಲೂಕಿನ ಚನ್ನಕಲ್ಲು ಗ್ರಾಮದ ಗುರೇಶ್ ಜೊತೆ ಬಂಗಾರಪೇಟೆ ತಾಲೂಕಿನ ನರ್ನಹಳ್ಳಿ ಗ್ರಾಮದ ಚೈತ್ರ (ಹೆಸರು ಬದಲಾಯಿಸಲಾಗಿದೆ) ಜೊತೆ ಮದುವೆ ನಡೆಯಬೇಕಿತ್ತು. ಆದರೆ ಮದುವೆ ಮುನ್ನ ಆರಕ್ಷರತೆ ದಿನದಂದು ವಧು ನಾಪತ್ತೆಯಾಗಿದ್ದಳು. ನಂತರದಲ್ಲಿ ವರ ಗುರೇಶ್ ಮದುವೆಯನ್ನು ಕುಟುಂಬದ ಮತ್ತೊಂದು ಹುಡುಗಿಯ ಜೊತೆ ಮದುವೆ ನಿಶ್ಚಯಿಸಿದ್ದರು.
ಆದರೆ ಮದುವೆ ದಿನ ಮುನ್ನ ಮುಂಜಾನೆ ವರ ಗುರೇಶ್ ಮದುವೆ ಮಂಟಪದಿಂದ ನಾಪತ್ತೆಯಾಗಿದ್ದ, ಇದರೊಂದಿಗೆ ಮದುವೆ ಮುರಿದು ಬಿದ್ದಿತ್ತು. ಮದುವೆ ಮನೆಯಲ್ಲಿ ನಡೆದ ವರ-ವಧು ನಾಪತ್ತೆಯ ದೊಡ್ಡ ಹೈ-ಡ್ರಾಮಾ ರಾಜ್ಯದೆಲ್ಲೆಡೆ ಸುದ್ದಿಯಾಗಿತ್ತು.