ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಗೊಲ್ಲನಬೀಡಿನಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಹಲವು ಮಜಲುಗಳು ಈಗ ಬೆಳಕಿಗೆ ಬರುತ್ತಿವೆ.
ಈ ನಡುವೆ ಹತ್ಯೆಯಾದ ಸುಷ್ಮಾಳ ಪ್ರಿಯಕರ ಉಮೇಶ್ ಪ್ರಾಣಭಯದಿಂದ ಊರು ಬಿಟ್ಟಿದ್ದಾನೆ. ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ನಿವಾಸಿ ಉಮೇಶ್, ವರ್ಷದ ಹಿಂದೆ ತನ್ನ ಪ್ರೇಮ ಪ್ರಕರಣ ಬೆಳಕಿಗೆ ಬಂದಾಗ ಹೆಚ್.ಡಿ.ಕೋಟೆ ಠಾಣೆಗೆ ಹೋಗಿ ನಂತರ ಊರು ಬಿಟ್ಟಿದ್ದಾನೆ.
Advertisement
ಸುಷ್ಮಾ ಪೋಷಕರಿಂದ ಕೊಲೆ ಬೆದರಿಕೆಗೆ ಹೆದರಿ ಉಮೇಶ್ ಊರು ಬಿಟ್ಟಿದ್ದಾನೆ ಎಂದು ಉಮೇಶ್ ತಂದೆ ದಾಸಯ್ಯ, ತಾಯಿ ನಂಜಮ್ಮಣ್ಣಿ ಆರೋಪಿಸುತ್ತಿದ್ದಾರೆ. ಈ ನಡುವೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮರ್ಯಾದಾ ಹತ್ಯೆ ನಡೆದಿದ್ದು ಪ್ರೀತಿಸಿದ್ದಕ್ಕಲ್ಲ ಬದಲಿಗೆ ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಎಂಬುದು ಬೆಳಕಿಗೆ ಬಂದಿದೆ.
Advertisement
Advertisement
ಗೊಲ್ಲನಬೀಡಿನ ಸುಷ್ಮಾ ಹಾಗೂ ಉಮೇಶ್ ಒಂದು ವರ್ಷದ ಹಿಂದೆ ಮನೆಯಿಂದ ದೂರ ಹೋಗಿ ಮದುವೆಯಾಗಿದ್ದರು. ಮದುವೆಯಾದ ಈ ಜೋಡಿಯನ್ನು ಹುಡುಕಿ ಕರೆಸಿದ್ದ ಸುಷ್ಮಾ ಕುಟುಂಬಸ್ಥರು ನಂತರ ರಾಜಿ ಪಂಚಾಯ್ತಿ ನಡೆಸಿ ಜೋಡಿಯನ್ನು ಬೇರೆ ಮಾಡಿ ಸುಷ್ಮಾಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು ಎಂದು ಉಮೇಶ್ ತಂದೆ- ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?
Advertisement
ಏನಿದು ಪ್ರಕರಣ?: ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾಗಿದ್ದ ಸುಷ್ಮಾ(20) ತಂದೆಯಿಂದಲೇ ಕೊಲೆಯಾಗಿದ್ದು, ತಾನೇ ಹತ್ಯೆ ಮಾಡಿರುವುದಾಗಿ ತಂದೆ ಗುರುವಾರ ಪೊಲೀಸರ ಮುಂದೆ ಒಪ್ಪಿಕೊಂಡಿದ್ದ. ಫೆಬ್ರವರಿ 21ರಂದು ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್‍ನನ್ನು ಕರೆಸಿ ವಿಚಾರಣೆ ನಡೆಸಿದಾಗ ಮಗಳನ್ನು ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದ.
ವಿಚಾರಣೆ ವೇಳೆ, “ನಾನೇ ಮಗಳಿಗೆ ವಿಷ ಕುಡಿಸಿ ನಂತರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದಿದ್ದೇನೆ. ದಲಿತ ಯುವಕನನ್ನು ಪ್ರೀತಿ ಮಾಡೋದು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಎಂಟು ದಿನಗಳ ಹಿಂದೆ ಮಗಳನ್ನು ಕೊಂದಿದ್ದೇನೆ” ಎಂದು ಸುಷ್ಮಾ ತಂದೆ ಕುಮಾರ್ ಪೊಲೀಸರ ಮುಂದೆ ಹೇಳಿದ್ದ. ಇದನ್ನೂ ಓದಿ: ನಾನೇ ಮಗಳಿಗೆ ವಿಷ ಕುಡಿಸಿ, ನಂತ್ರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದೆ!