ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಡಿಸೆಂಬರ್ 14ರಂದು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿದ್ಯಾರ್ಥಿನಿ ಮೇಲೆ ಯಾರು ಹಲ್ಲೆ ನಡೆಸಿಲ್ಲ ಬದಲಿಗೆ ಆಕೆಯೇ ನಿಂಬೆ ಮುಳ್ಳಿನಿಂದ ಗಾಯ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ತನಿಖೆ ವೇಳೆ ಬಹಿರಂಗಗೊಂಡಿದೆ.
ಘಟನೆ ಕುರಿತು ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದು, ವಿದ್ಯಾರ್ಥಿನಿ ಗಾಯ ಮಾಡಿಕೊಂಡು ಮನೆಗೆ ಹೋಗದೇ ಐದು ಕಿಲೋ ಮೀಟರ್ ನಡೆದು ಮಾಗೋಡಿಗೆ ತೆರಳಿದ್ದಾಳೆ. ಈ ವೇಳೆ ಅಲ್ಲಿನ ಸ್ಥಳೀಯರು ವಿದ್ಯಾರ್ಥಿನಿಗೆ ಆದ ಗಾಯ ನೋಡಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ನಡೆದಿದ್ದೇನು?
ವಿದ್ಯಾರ್ಥಿನಿ ಶಾಲೆ ತೆರಳುವ ಸಂದರ್ಭದಲ್ಲಿ ಪ್ರತಿ ದಿನ ಅದೇ ಗ್ರಾಮದ ಗಣೇಶ್ ಎನ್ನುವ ಯುವಕ ದಾರಿಯಲ್ಲಿ ಅಡ್ಡಗಟ್ಟಿ ನನ್ನನ್ನು ಪ್ರೀತಿಸು ಎಂದು ತೊಂದರೆ ಕೊಡುತ್ತಿದ್ದ. ಘಟನೆ ನಡೆದ ದಿನವೂ ಗಣೇಶ್ ಮತ್ತು ಆತನ ಸ್ನೇಹಿತ ಸಂತೋಷ್ ವಿದ್ಯಾರ್ಥಿನಿಗೆ ತೊಂದರೆ ಕೊಟ್ಟಿದ್ದರು. ಇದೇ ಸಮಯದಲ್ಲಿ ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿತ್ತು. ಇದರಿಂದ ಗೊಂದಲಕ್ಕೆ ಒಳಗಾಗಿ ವಿದ್ಯಾರ್ಥಿನಿ ಅವರಿಬ್ಬರಿಂದ ಮತ್ತು ಶಾಲೆಯ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ನಿಂಬೆ ಮುಳ್ಳಿನಿಂದ ಸ್ವತಃ ಕೈ ಕೊಯ್ದು ಕೊಂಡಿದ್ದಾಳೆ ಎಂದು ಎಸ್‍ಪಿ ವಿನಾಯಕ್ ಹೇಳಿದ್ದಾರೆ.
Advertisement
ಪ್ರಸ್ತುತ ವಿದ್ಯಾರ್ಥಿನಿಗೆ ಈ ಸಂಬಂಧ ತಜ್ಞರು ಪರೀಕ್ಷೆ ನಡೆಸಿ, ಸಾಂತ್ವನ ಕೇಂದ್ರದಿಂದ ಕೌನ್ಸಿಲಿಂಗ್ ನಡೆಸಲಾಗಿದೆ. ಇನ್ನು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಗಣೇಶ್ ಹಾಗೂ ಆತನ ಸ್ನೇಹಿತ ಸಂತೋಷ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ.
Advertisement
ಏನಿದು ಘಟನೆ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು. ಡಿಸೆಂಬರ್ 14 ರಂದು ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಚಾಕು ಇರಿಯಲಾಗಿದೆ ಎಂಬ ಸುದ್ದಿ ಹರಡುತ್ತಿದಂತೆ, ಹೊನ್ನಾವಾರದ ಮಾಗೋಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದರು. ಅಲ್ಲದೇ ಸಿ.ಸಿ ಕ್ಯಾಮರಾ ಮಾಹಿತಿ ಆಧಾರದಲ್ಲಿ ಹಲವರನ್ನು ಬಂಧನ ಮಾಡಲಾಗಿತ್ತು.