ಬೆಳಗಾವಿ: ಮಹತ್ವದ ಬೆಳವಣಿಗೆಯಲ್ಲಿ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಅಥಣಿ ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ರಮೇಶ್ ಮತ್ತು ಮಹೇಶ್ ಕುಮಟಳ್ಳಿ ತಮ್ಮ ಬೆಂಬಲಿಗರನ್ನು ದೂರ ಇಟ್ಟು ಗುಪ್ತ್ ಗುಪ್ತ್ ಮೀಟಿಂಗ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸದಲ್ಲಿ ಸುಮಾರು ಒಂದು ಗಂಟೆ ಕಾಲ ಗುರು-ಶಿಷ್ಯರ ನಡೆದು ಚರ್ಚೆ ನಡೆದಿದೆ. ರಾಜೀನಾಮೆ ನೀಡುವ ಕುರಿತು ಮಹೇಶ್ ಕುಮಟಳ್ಳಿ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ ಮೇ.23ರ ನಂತರ ರಾಜೀನಾಮೆ ನೀಡುತ್ತಿರುವ ಕುರಿತು ಹೇಳಿಕೊಂಡಿದ್ದಾರೆ. ನೀವು ಬಂದರೆ ಓಕೆ, ಇಲ್ಲ ಅಂದರೂ ಒಬ್ಬನೇ ರಾಜೀನಾಮೆ ನೀಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶಾಸಕ ಮಹೇಶ್ ಕುಮಟಳ್ಳಿ ಸೆಳೆಯಲು ಯತ್ನಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೆಎಂಎಫ್ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಲ್ಲರ ಆಶೀರ್ವಾದ ಇದೆ. ಕುಮಟಳ್ಳಿ ಕಾರ್ಯಕ್ರಮಕ್ಕೆ ಬಂದಿದ್ದಾನೆ ಅವನು ನಮ್ಮವನೇ. ಕೆಎಂಎಫ್ ಚುನಾವಣೆ ಅಂದರೆ ಎಂಎಲ್‍ಎ ಚುನಾವಣೆ ಇದ್ದ ಹಾಗೆ. ಅದಕ್ಕೆ ನೀವು ಸಹಕಾರ ಕೊಡಬೇಕು. 23ರ ಚುನಾವಣೆ ಫಲಿತಾಂಶದ ನಂತರ ಸರ್ಕಾರದಲ್ಲಿ ಬಹಳ ಬದಲಾವಣೆ ಆಗಲಿದೆ ಎಂದರು.
ಕೆಂಪು ಲೈಟ್ ಹಾಕಿಕೊಂಡು ಓಡಾಡುವರು ಮಾಜಿ ಆಗುತ್ತಾರೆ. ಪರೋಕ್ಷವಾಗಿ ಈಗಿರುವ ಎಲ್ಲ ಸಚಿವರು ಮಾಜಿ ಆಗಲಿದ್ದಾರೆ. ಈಗ ಕೆಂಪು ಲೈಟ್ ಹಾಕಿಕೊಂಡು ಓಡಾಡುವರನ್ನ ನೋಡಿ ಹೆದರಬೇಡಿ. ದೊಡ್ಡ ಪ್ರಮಾಣದಲ್ಲಿ ನಮಗೆ ಅಧಿಕಾರ ಬರುತ್ತದೆ. ವಿಶ್ವಾಸ ದ್ರೋಹ, ಬೆನ್ನಿಗೆ ಚೂರಿ ಹಾಕುವ ಮಂದಿಯನ್ನು ನಂಬಬೇಡಿ. ಅಧಿಕಾರ ಬರಲಿ ಬಿಡಲಿ ನಮ್ಮನ್ನ ನಂಬಿ ಎಂದು ಹೇಳುವ ಮೂಲಕ ಸಹೋದರ ಸತೀಶ್‍ಗೆ ರಮೇಶ್ ಟಾಂಗ್ ಕೊಟ್ಟಿದ್ದಾರೆ.
ಇತ್ತ ರಮೇಶ್ ಜಾರಕಿಹೊಳಿ ಮಾತಿಗೆ ಮಹೇಶ್ ಕುಮಟಳ್ಳಿ ತಲೆ ಅಲ್ಲಾಡಿಸಿದ್ದು, ಮಾತುಕತೆ ಮುಗಿಸಿ ಹೊರ ಬಂದ ಮಹೇಶ್ ಕುಮಟಳ್ಳಿ ರಾಜಕೀಯ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅಥಣಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ಕುರಿತು ಶಾಸಕ ರಮೇಶ್ ಜಾರಕಿಹೊಳಿಯೊಂದಿಗೆ ಚರ್ಚೆ ಮಾಡಿದ್ದೇನೆ. ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಸಿಎಂ ಜೊತೆ ಮಾತನಾಡುತ್ತೇನೆ ಅಂದಿದ್ದಾರೆ. ಇನ್ನು ಎರಡು ದಿನಗಳಲ್ಲಿ ಕೃಷ್ಣಾ ನದಿಗೆ ನೀರು ಬಿಡಿಸುವ ಭರವಸೆಯನ್ನು ರಮೇಶ್ ನೀಡಿದ್ದಾರೆ. ರಮೇಶ್ ಮಗ ಅಮರನಾಥ ಸತ್ಕಾರ ಕಾರ್ಯಕ್ರಮ ಇತ್ತು ಇದರಲ್ಲಿ ಭಾಗಿಯಾಗಿದ್ದೆ ಅಷ್ಟೇ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.