ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಲಿದೆ ಎಂಬ ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡುತ್ತಾ ಬರುತ್ತಿದ್ದಾರೆ. ಉಪ ಚುನಾವಣೆಯ ಚಿಂಚೋಳಿ ಮತ್ತು ಕುಂದಗೋಳವನ್ನು ಗೆದ್ದು ಬಿಜೆಪಿ ಸರ್ಕಾರ ರಚಿಸಿ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗ್ತಾರೆ ಎಂದು ಕಮಲ ನಾಯಕರು ಹೇಳುತ್ತಿದ್ದಾರೆ. ಇತ್ತ ಯಡಿಯೂರಪ್ಪ ಸಹ ತೆರೆಮರೆಯಲ್ಲಿ ಆಪರೇಷನ್ ಕಮಲದಡಿ ಕೈ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂಬ ಅನುಮಾನ ದೋಸ್ತಿಗಳಲ್ಲಿ ಮೂಡಿದೆ. ಹೀಗಾಗಿ ಆಪರೇಷನ್ ಕಮಲದ ಹುರುಪಿನಲ್ಲಿರುವ ಯಡಿಯೂರಪ್ಪರನ್ನ ಕಟ್ಟಿ ಹಾಕಲು ದಳಪತಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
Advertisement
ದೋಸ್ತಿ ಸರ್ಕಾರದ ಗುರುಮಿಠಕಲ್ ಶಾಸಕ ನಾಗನಗೌಡರಿಗೆ ಆಪರೇಷನ್ ಕಮಲದಡಿಯಲ್ಲಿ ಬಿಜೆಪಿಗೆ ಕರೆತರಲು ಯಡಿಯೂರಪ್ಪ ಪ್ರಯತ್ನಿಸಿದ್ದಾರೆ ಎನ್ನಲಾದ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಈ ಹಿಂದೆ ಬಿಡುಗಡೆ ಮಾಡಿದ್ದರು. ಇದೇ ಆಪರೇಷನ್ ಆಡಿಯೋವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ದೋಸ್ತಿ ನಾಯಕರು ಮುಂದಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಲೋಕಸಭಾ ಚುನಾವಣೆ ಫಲಿತಾಂಶ ಬೆನ್ನಲ್ಲೇ ರಾಜ್ಯ ಸರ್ಕಾರ ಆಡಿಯೋಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸುವ ಸಾಧ್ಯತೆಗಳಿವೆ. ಒಂದು ವೇಳೆ ಎಸ್‍ಐಟಿ ರಚನೆಯಾದ್ರೆ, ಅಧಿಕಾರಿಗಳು ಯಡಿಯೂರಪ್ಪ ಅವರನ್ನು ಆಡಿಯೋಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಾಗುತ್ತದೆ. ವಿಚಾರಣೆಗೆ ಅಗತ್ಯ ಬಿದ್ದಲ್ಲಿ ಯಡಿಯೂರಪ್ಪರನ್ನು ಎಸ್‍ಐಟಿ ತಂಡ ಬಂಧಿಸುವ ಸಾಧ್ಯತೆಗಳಿವೆ. ಆಪರೇಷನ್ ಕಮಲದಲ್ಲಿ ಬ್ಯುಸಿಯಾಗಿರುವ ಯಡಿಯೂರಪ್ಪರನ್ನು ಕಟ್ಟಿ ಹಾಕಲು ದೋಸ್ತಿ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.