ನವದೆಹಲಿ: ಉಗ್ರ ತಹವ್ವೂರ್ ರಾಣಾನ ಹಸ್ತಾಂತರವು 26/11 ಸಂತ್ರಸ್ತರಿಗೆ ಒದಗಿಸಿದ ನ್ಯಾಯದಲ್ಲಿ ದೊಡ್ಡ ಹೆಜ್ಜೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಜೈಶಂಕರ್, ನಮ್ಮ ಉಭಯ ದೇಶಗಳ ನಡುವಿನ ಭಯೋತ್ಪಾದನಾ ನಿಗ್ರಹದ ಸಹಕಾರವನ್ನು ಪ್ರಶಂಸಿಸಿ. ಇದು ನಿಜಕ್ಕೂ 26/11 ದಾಳಿಯ ಬಲಿಪಶುಗಳಿಗೆ ನ್ಯಾಯವನ್ನು ಖಾತ್ರಿಪಡಿಸುವ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಜೈಶಂಕರ್ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, 2008 ರ ಭೀಕರ ಮುಂಬೈ ಭಯೋತ್ಪಾದಕ ದಾಳಿಯನ್ನು ಯೋಜಿಸುವಲ್ಲಿ ಪಾತ್ರ ವಹಿಸಿದ ಆರೋಪಗಳನ್ನು ಎದುರಿಸುತ್ತಿರುವ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಿದ್ದೇವೆ. ಈ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡ 6 ಅಮೆರಿಕನ್ನರು ಸೇರಿದಂತೆ 166 ಜನರಿಗೆ ನ್ಯಾಯಕ್ಕಾಗಿ ನಾವು ಭಾರತದೊಂದಿಗೆ ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿದ್ದೇವೆ. ಆ ದಿನ ಬಂದಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
64 ವರ್ಷದ ಪಾಕಿಸ್ತಾನ ಮೂಲದ ಕೆನಡಾದ ಪ್ರಜೆ ರಾಣಾನನ್ನು ಅಮೆರಿಕ ಗುರುವಾರ ಭಾರತಕ್ಕೆ ಹಸ್ತಾಂತರಿಸಿತು. ವಿಮಾನ ನಿಲ್ದಾಣದಲ್ಲಿಯೇ ಉಗ್ರನನ್ನು ಬಂಧಿಸಿದ ಎನ್‌ಐಎ ವಿಚಾರಣೆಗೆ ಒಳಪಡಿಸಿದೆ.