DistrictsHaveriKarnatakaLatest

ಹಿರೇಕೆರೂರಿನಲ್ಲಿ ಬಿಜೆಪಿಗೆ ಬಿಗ್ ರಿಲೀಫ್

ಹಾವೇರಿ: ಜೆಡಿಎಸ್ ಅಭ್ಯರ್ಥಿಯಾಗಿ ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದಿದ್ದ ಕಬ್ಬಿಣಕಂಥಿ ಮಠದ ಸ್ವಾಮೀಜಿ ಈಗ ನಾಮಪತ್ರ ವಾಪಸ್ ಪಡೆದಿದ್ದು, ಇದರಿಂದ ಬಿಜೆಪಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಪಂಚಮಠಾಧೀಶರ ಒತ್ತಡಕ್ಕೆ ತಲೆಬಾಗಿ ಶಿವಲಿಂಗ ಶಿವಾಚಾರ್ಯ ಶ್ರೀಗಳು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಸಂಸದ ರಾಘವೇಂದ್ರ ಸಮ್ಮುಖದಲ್ಲಿ ಶಿವಾಚಾರ್ಯ ಸ್ವಾಮೀಜಿ ತಮ್ಮ ನಾಮಪತ್ರವನ್ನು ವಾಪಾಸ್ ಪಡೆದಿದ್ದಾರೆ. ಮಾಲೆ ಹಾಕುವ ಮೂಲಕ ರಾಘವೇಂದ್ರ ಅವರು ಸ್ವಾಮೀಜಿ ಅವರನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ನಾಮಪತ್ರ ಹಿಂಪಡೆಯಲು ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ಸ್ವಾಮೀಜಿ ನಿರ್ಧಾರ

ಮಂಗಳವಾರ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಶ್ರೀಗಳು, ನಾಮಪತ್ರ ಹಿಂಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದರು. ಹಿರಿಯ ಮಠಾಧೀಶರ ಆದೇಶದಿಂದ ನಿರ್ಧಾರ ಬದಲಿಸಿದ್ದೇನೆ. ಸಾಧ್ಯವಾದರೆ ಬುಧವಾರವೇ ನಾಮಪತ್ರ ಹಿಂಪಡೆಯುತ್ತೇನೆ. ಒಂದು ವೇಳೆ ಸಾಧ್ಯವಾಗದಿದ್ದರೆ ಗುರುವಾರ ನಾಮಪತ್ರ ವಾಪಸ್ ಪಡೆಯುವುದು ಖಚಿತ. ಯಾರೇ ಜನಪ್ರತಿನಿಧಿ ಆಯ್ಕೆಯಾಗಿ ಬಂದರೂ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಕ್ಕೆ ತರುವ ಅಜೆಂಡಾಗೆ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ವಾಪಸ್ ಪಡೆಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ನಾನು ಸೇಫ್ ಆಗಿದ್ದೇನೆ, ನಿಲುವು ಬದಲಿಸಲ್ಲ: ಜೆಡಿಎಸ್ ಅಭ್ಯರ್ಥಿ ಹಿರೇಕೆರೂರು ಸ್ವಾಮೀಜಿ

ಕೆಲ ದಿನಗಳ ಹಿಂದೆ ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದರು. ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದರು. ಕಳೆದ ಎರಡು ದಿನಗಳ ಹಿಂದೆ ಚುನಾವಣೆಗೆ ನಿಲ್ಲದಿರಲು ನಿರ್ಧರಿಸಿದ್ದ ಸ್ವಾಮೀಜಿ, ರಾತ್ರೋರಾತ್ರಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರು. ಅದರಂತೆ ಸೋಮವಾರ ಜೆಡಿಎಸ್ ಅಭ್ಯರ್ಥಿಯಾಗಿ ಹಿರೇಕೆರೂರು ಕ್ಷೇತ್ರದಿಂದ ನಾಮಪತ್ರ ಸಹ ಸಲ್ಲಿಸಿದ್ದರು. ಇದನ್ನೂ ಓದಿ: ಗುರುಗಳ ಬಳಿ ಭಕ್ತರೇ ಹೋಗಬೇಕು, ಭಕ್ತರ ಬಳಿ ಗುರುಗಳು ಹೋಗಬಾರದು: ಶಿವಲಿಂಗ ಸ್ವಾಮೀಜಿಗೆ ತರಾಟೆ

ಚುನಾವಣೆಗೆ ನಿಲ್ಲಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಬೇಡಿಕೊಂಡಿದ್ದರು. ಬಿ.ಸಿ ಪಾಟೀಲ್ ಅವರನ್ನು ಸೋಲಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತರ ಮತ ಒಡೆಯಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಈ ರಣತಂತ್ರ ರೂಪಿಸಿದ್ದಾರೆ ಎಂದು ಭಕ್ತರು ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದರು.

Leave a Reply

Your email address will not be published. Required fields are marked *

Back to top button