ಮತ್ತೆ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಸದ್ದು: ಯಾರು ಏನು ಹೇಳಿದ್ರು?

Public TV
2 Min Read
HIT RUN COLLAGE

ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಹಗರಣ ಆರೋಪ ಪ್ರಸ್ತಾಪವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ಆರಂಭದಲ್ಲೇ ಇಂದಿರಾ ಕ್ಯಾಂಟೀನ್ ಬಗ್ಗೆ ಚರ್ಚೆಗೆ ರಾಮದಾಸ್ ಅವಕಾಶ ಕೇಳಿದರು. ರಾಮದಾಸ್ ಮನವಿಯನ್ನು ಬೆಂಬಲಿಸಿದ ಬಿಜೆಪಿಯ ಅರವಿಂದ ಲಿಂಬಾವಳಿ, ಈ ಹಿಂದೆ ನಾನು ವಾಚ್ ವಿಚಾರವನ್ನೂ ಪ್ರಸ್ತಾಪಿಸಿದ್ದೆ. ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಹಾಗಾಗಿ ಎಐಸಿಸಿ ಕಿಕ್ ಬ್ಯಾಕ್ ವಿಚಾರವನ್ನು ಪ್ರಸ್ತಾಪಿಸಿದ್ದ ರಾಮದಾಸ್ ಅವರಿಗೂ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡರು.

ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಪ್ರವೇಶಿಸಿ, ರಾಮದಾಸ್ ಅವರು ಹಿಟ್ ಅಂಡ್ ರನ್ ಆರೋಪ ಮಾಡಿದ್ದಾರೆ. ಸೂಕ್ತ ದಾಖಲೆಗಳನ್ನು ಒದಗಿಸಲಿ. ದಾಖಲೆ ಇಟ್ಟು ಆರೋಪ ಮಾಡಲಿ. ದಾಖಲೆ ತೋರಿಸಿದರೆ ನಾವು ಕೂಡಾ ಚರ್ಚೆ ನಡೆಸಲು ಸಿದ್ಧ ಎಂದು ಉತ್ತರಿಸಿದರು.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಚಾರಿತ್ರ್ಯವಧೆಗೆ ಇಲ್ಲಿ ಅವಕಾಶ ಕೊಡುವುದಿಲ್ಲ. ಎಐಸಿಸಿ ಒಂದು ಐತಿಹಾಸಿಕ ಸಂಸ್ಥೆ. ಆಧಾರಗಳಿಲ್ಲದೆ ಎಐಸಿಸಿ ವಿರುದ್ಧ ಆರೋಪ ಮಾಡುವಂತಿಲ್ಲ. ಹಾಗಾಗಿ ದಾಖಲೆಗಳನ್ನು ಇಟ್ಟರೆ ಚರ್ಚೆಗೆ ಅವಕಾಶ ಕೊಡ್ತೀನಿ ಎಂದು ಸ್ಪೀಕರ್ ರಮೇಶ್ ಕುಮಾರ್ ರಾಮದಾಸ್‍ಗೆ ಖಡಕ್ ಸೂಚನೆ ನೀಡಿದರು.

HIT RUN 2

ಸ್ಪೀಕರ್ ಹೇಳಿದ ಕೂಡಲೇ ಮಧ್ಯಪ್ರವೇಶಿಸಿದ ಸಿಟಿ ರವಿ, ಇದು ಹಿಟ್ ಆಂಡ್ ರನ್ ಅಲ್ಲ ಇದು ಹಿಡ್ ಆಂಡ್ ಕ್ಯಾಚ್. ಹೀಗಾಗಿ ರಾಮದಾಸ್ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸಿಟಿ ರವಿ ಅವರಿಂದ ಈ ಮಾತು ಬಂದ ಕೂಡಲೇ ಸದನದಲ್ಲಿ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ ಕಾರಣ ಗದ್ದಲ ಉಂಟಾಯಿತು. ಆಗ ಸಿಟಿ ರವಿ, ಕಾಂಗ್ರೆಸ್ಸಿನವರು ಸತ್ಯ ಹರಿಶ್ಚಂದ್ರರೇ ಅಂತಾನೇ ಭಾವಿಸೋಣ, ಚರ್ಚೆಗೆ ಅವಕಾಶ ಕೊಡಿ ಎಂದು ಕೇಳಿಕೊಂಡರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಾರಾ ಮಹೇಶ್, ಯಾರು ಯಾರು ಹರಿಶ್ಚಂದ್ರರು ಎನ್ನುವುದು ಗೊತ್ತಿದೆ. ನೀವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ನಾವು ಬಹಳ ಹರಿಶ್ಚಂದ್ರರನ್ನು ನೋಡಿದ್ದೇವೆ ಎಂದು ತಿರುಗೇಟು ನೀಡಿದರು. ಇದಕ್ಕೆ ಸಿಟಿ ರವಿ ಆಕ್ಷೇಪ ವ್ಯಕ್ತಪಡಿಸಿ ಈ ವಿಚಾರಕ್ಕೂ ಅದಕ್ಕೆ ಏನ್ ಸಂಬಂಧ? ಸಾರಾ ಮಹೇಶ್‍ಗೆ ಉಳಿವಿನ ಪ್ರಶ್ನೆ ಇರಬೇಕು ಎಂದು ವ್ಯಂಗ್ಯವಾಡಿದರು.

ಆರಂಭದಿಂದಲೂ ಇಂದಿರಾ ಕ್ಯಾಂಟೀನ್ ಚರ್ಚೆಗೆ ಪಟ್ಟು ಹಿಡಿದಿದ್ದ ರಾಮದಾಸ್ ಸದನದ ಬಾವಿಗೆ ಇಳಿದು, ಹಿಟ್ ಆಂಡ್ ರನ್ ಪದ ಬಳಕೆಯಿಂದ ನನಗೆ ಅವಮಾನವಾಗಿದೆ. ಈ ಪದವನ್ನು ಕಡತದಿಂದ ತೆಗೆಯಬೇಕು ಎಂದು ಪ್ರತಿಭಟಿಸಿದರು. ಕೊನೆಗೆ ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ ಸೂಚನೆ ಮೇರೆಗೆ ಕೃಷ್ಣಭೈರೇಗೌಡ ಅವರು ಬಳಸಿದ್ದ ಹಿಟ್ ಆಂಡ್ ರನ್ ಪದವನ್ನು ಕಡತದಿಂದ ತೆಗೆಯಲಾಯಿತು. ಪದ ತೆಗೆದ ಬಳಿಕ ಪ್ರತಿಭಟನೆ ಕೈ ಬಿಟ್ಟು ರಾಮದಾಸ್ ತಮ್ಮ ಸೀಟ್‍ಗೆ ತೆರಳಿ ಕುಳಿತುಕೊಂಡರು.

Share This Article
Leave a Comment

Leave a Reply

Your email address will not be published. Required fields are marked *