– ಮೊದಲ ಆವೃತ್ತಿಯ ಸ್ಪರ್ಧಿಗಳು ನೈಜವಾಗಿ ಅಭಿನಯಿಸಿದ್ರು
– ಅಯ್ಯಪ್ಪ ಬಿಟ್ಟರೆ ನಾನು ಯಾರನ್ನೂ ರೆಫರ್ ಮಾಡಿಲ್ಲ
ಬೆಂಗಳೂರು: ಬಿಗ್ ಬಾಸ್ ಶೋ ನಡೆಸುತ್ತಿರುವ ನಿಮ್ಮ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆಗೆ ಸುದೀಪ್ ಸ್ಮಾರ್ಟ್ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಶೋ ಹಿನ್ನೆಲೆಯಲ್ಲಿ ಇಂದು ವಾಹಿನಿ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ನಿಮ್ಮ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆಯನ್ನು ಸುದೀಪ್ ಅವರಲ್ಲಿ ಕೇಳಲಾಯಿತು. ಈ ಪ್ರಶ್ನೆಗೆ, ಸಂಭಾವನೆ ವಿಚಾರವನ್ನು ನಾನು ಪತ್ನಿ ಬಿಟ್ಟು ಬೇರೆ ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲ ಎಂದು ಸ್ಮಾರ್ಟ್ ಉತ್ತರ ನೀಡಿದರು.
Advertisement
Advertisement
ಈ ವೇಳೆ ಶೋಗೆ ನೀವು ಇಲ್ಲಿಯವರೆಗೆ ಯಾರನ್ನು ರೆಫರ್ ಮಾಡಿದ್ರಾ ಎನ್ನುವ ಪ್ರಶ್ನೆಗೆ, ಒಬ್ಬ ಕ್ರೀಡಾಪಟು ಇದ್ದರೆ ಚಂದ ಎಂಬ ಕಾರಣಕ್ಕೆ ಬಿಗ್ ಬಾಸ್‍ನ 4ನೇ ಆವೃತ್ತಿಯಲ್ಲಿ ಕ್ರಿಕೆಟರ್ ಅಯ್ಯಪ್ಪನನ್ನು ಕರೆದುಕೊಳ್ಳುವಂತೆ ರೆಫರ್ ಮಾಡಿದ್ದೆ ಅಷ್ಟೇ ಎಂದು ಹೇಳಿದರು.
Advertisement
ನಾನು ಇಲ್ಲಿಯವರೆಗೆ ಯಾರನ್ನೂ ಕರೆದುಕೊಳ್ಳಿ ಎಂದು ರೆಫರ್ ಮಾಡಿಲ್ಲ. ಆದರೆ ಒಬ್ಬರು ಸ್ಪರ್ಧಿ ಕೈಕೊಟ್ಟ ಸಂದರ್ಭದಲ್ಲಿ ಕ್ರೀಡಾಪಟು ಇದ್ದರೆ ಚೆಂದ ಎನ್ನುವ ಕಾರಣಕ್ಕೆ ಕ್ರಿಕೆಟರ್ ಅಯ್ಯಪ್ಪನನ್ನು ನಾನು ರೆಫರ್ ಮಾಡಿದ್ದೆ. ಅದನ್ನು ಬಿಟ್ಟರೆ ಮತ್ತೆ ಯಾರನ್ನೂ ನಾನು ರೆಫರ್ ಮಾಡಿಲ್ಲ. ಹಲವು ರಾಜಕಾರಣಿಗಳು ಸೇರಿ ನಮ್ಮ ಕಡೆಯೊಬ್ಬರು ಇರುತ್ತಾರೆ ಎಂದು ಕರೆ ಮಾಡುತ್ತಲೇ ಇರುತ್ತಾರೆ ಎಂದರು.
Advertisement
ಮೊದಲ ಅವೃತ್ತಿಗೆ ಮೆಚ್ಚುಗೆ
ಬಿಗ್ ಬಾಸ್‍ನಲ್ಲಿ ಮತ್ತೆ ಭಾಗಿಯಾಗುತ್ತಿರುವುದು ಖುಷಿ ತಂದಿದೆ. ಏಳು ವರ್ಷ ಕಳೆದಿರುವುದೇ ಗೊತ್ತಾಗಿಲ್ಲ. ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯನ್ನು ನಾನೆಂದೂ ಕೇಳುವುದಿಲ್ಲ. ಬಿಗ್ ಬಾಸ್‍ನಿಂದ ಒಂದೊಳ್ಳೆ ಅನುಭವ ಸಿಕ್ಕಿದೆ. ಮೊದಲ ಆವೃತ್ತಿಯ ಸ್ಪರ್ಧಿಗಳು ನನಗೆ ತುಂಬಾ ಫೇವರಿಟ್. ಅವರೆಲ್ಲ ನೈಜವಾಗಿ ಅಭಿನಯಿಸಿದರು. ಅಲ್ಲದೆ ಅವರಿಗೆ ಬಿಗ್ ಬಾಸ್ ಏನು ಎಂಬುದು ತಿಳಿದಿರಲಿಲ್ಲ. ಹೀಗಾಗಿ ಅವರು ನನಗಿಷ್ಟ ಎಂದು ಬಿಗ್ ಬಾಸ್ ಮೊದಲನೇ ಸೀಸನ್‍ನ ಸ್ಪರ್ಧಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಸೀಸನ್‍ನ ಯಾವೊಬ್ಬ ಸ್ಪರ್ಧಿಗಳಿಗೆ ಬಿಗ್ ಬಾಸ್ ಹೇಗೆ ನಡೆಯುತ್ತದೆ ಎನ್ನುವುದು ಗೊತ್ತಿರಲಿಲ್ಲ. ಆದರೆ ಮುಂದೆ ಬಂದವರು ಗೆಲ್ಲುವುದಕ್ಕೋಸ್ಕರ ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡಿದರು. ಆದ್ದರಿಂದ ಫಸ್ಟ್ ಸೀಸನ್ ಸ್ಪರ್ಧಿಗಳು ನನಗೆ ತುಂಬಾ ಇಷ್ಟ ಎಂದರು.
ಈ ಬಾರಿಯ ವಿಜೇತರಿಗೆ ಕೇವಲ 50 ಲಕ್ಷ ರೂಪಾಯಿ ಮಾತ್ರವಲ್ಲ ಬೇರೆ ಮೂಲಗಳಿಂದಲೂ ಲಾಭ ಆಗಲಿದೆ. ಈ ಹಿಂದಿನ ಸೀಸನ್‍ನ ಎಷ್ಟೋ ಸ್ಪರ್ಧಿಗಳು ಕಿರುತೆರೆ, ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಒಂದಷ್ಟು ಜನ ಏನೇನೋ ಮಾಡುತ್ತೇನೆ ಎಂದುಕೊಂಡು ಏನೂ ಮಾಡಿಲ್ಲ. ಆದ್ದರಿಂದ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸ್ಪರ್ಧಿಗಳಿಗೆ ಸುದೀಪ್ ಸಲಹೆ ನೀಡಿದರು.
ಬಿಗ್ ಬಾಸ್‍ನಿಂದ ನಮ್ಮ ಮೇಲಿದ್ದ ದೃಷ್ಟಿ ಬದಲಾಯಿತು. ಇಲ್ಲವಾದಲ್ಲಿ ಅಯ್ಯೋ ಅವನ ಎನ್ನುವ ರೀತಿ ಮಾತನಾಡುತ್ತಿದ್ದರು. ಇದು ಪ್ಯೂರ್ ಸೆಲೆಬ್ರಿಟಿಗಳಿಗಾಗಿ ಇದ್ದದ್ದು, ಆದರೆ ಇದರ ನಡುವೆ ಹೊಸದೊಂದು ಪ್ರಯೋಗ ಆಗಲಿ ಎಂದು ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿತ್ತು. ಆದರೆ ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಜೊತೆಗೆ ಜನರ ಪ್ರೀತಿ ಸ್ಪರ್ಧಿಗಳಿಗೆ ಸಿಗಲಿದೆ ಎಂದು ತಿಳಿಸಿದರು.
ಬಿಗ್ ಬಾಸ್ ವಿಶೇಷತೆ
ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾತನಾಡಿ, ಈ ಬಾರಿ 1.30 ಗಂಟೆಗಳ ಕಾಲ ಶೋ ಇರಲಿದೆ. ಅಲ್ಲದೆ ಪ್ರತಿ ಭಾನುವಾರ ವಿಶೇಷ ಶೋ ಇರಲಿದೆ. ಜೊತೆಗೆ ಅಕ್ಟೋಬರ್ 13 ರಂದು ಆರು ಮಲ್ಟಿಪ್ಲೆಕ್ಸ್ ಸ್ಕ್ರೀನ್‍ಗಳಲ್ಲಿ ಲೈವ್ ನಡೆಯಲಿದೆ. ಇದು ಲಾಂಚ್ ಡೇ ಶೋ ವಿಶೇಷತೆಯಾಗಿದೆ. ಬೆಂಗಳೂರಿನ 3, ಮೈಸೂರು 1, ಮಣಿಪಾಲ್ ಮತ್ತು ಉಡುಪಿಯಲ್ಲಿ ತಲಾ ಒಂದೊಂದು ಸ್ಕ್ರೀನ್‍ಗಳಲ್ಲಿ ಲೈವ್ ಪ್ರಸಾರವಾಗಲಿದೆ ಮಾಹಿತಿ ನೀಡಿದರು.