ಬಾಲಿವುಡ್ ನಲ್ಲಿ ಮೂಡಿ ಬರುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಪ್ರೊಮೋ ರಿಲೀಸ್ ಆಗಿದ್ದು, ಸಾರ್ವಕರ್ ಪತ್ನಿಯಾಗಿ ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಕಂಡೆ (Ankita Lokande) ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ರಣದೀಪ್ ಹೂಡಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅವರೇ ಸಾವರ್ಕರ್ ಪಾತ್ರವನ್ನೂ ನಿರ್ವಹಿಸಿದ್ದಾರೆ.
Advertisement
ಈ ನಡುವೆ ಸಿನಿಮಾ ಬಗ್ಗೆ ಅಪಸ್ವರ ಕೇಳಿ ಬಂದಿದೆ. ನಿರ್ದೇಶಕರ ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಕುಟುಂಬ ಅಸಮಾಧಾನಗೊಂಡಿದೆ. ರಣದೀಪ್ ನಿರ್ದೇಶಿಸಿ, ನಟಿಸುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಕುರಿತಾದ ಪೋಸ್ಟರ್ ನಲ್ಲಿ ನೇತಾಜಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನೇತಾಜಿ ಮರಿ ಮೊಮ್ಮಗ ಚಂದ್ರಕುಮಾರ್ ಬೋಸ್ (Chandrakumar Bose) ಗರಂ ಆಗಿದ್ದಾರೆ.
Advertisement
Advertisement
ಸಾವರ್ಕರ್ (Veer Savarkar) ಹುಟ್ಟು ಹಬ್ಬದ ದಿನದಂದು ರಣದೀಪ್ ತಮ್ಮ ಸಿನಿಮಾದ ಪೋಸ್ಟರ್ ನ್ನು ಹಂಚಿಕೊಂಡಿದ್ದರು. ಆ ಪೋಸ್ಟರ್ ಪೋಸ್ಟ್ ಮಾಡುವಾಗ ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಹಾಗೂ ಖುದಿರಾಮ್ ಬೋಸ್ ಇವರೆಲ್ಲರಿಗೂ ಸಾವರ್ಕರ್ ಸ್ಫೂರ್ತಿಯಾಗಿದ್ದರು ಎನ್ನುವ ಅರ್ಥದಲ್ಲಿ ಬರೆದಿದ್ದರು. ಈ ಬರಹವೇ ನೇತಾಜಿ ಕುಟುಂಬಕ್ಕೆ ಕೋಪ ತರಿಸಿದೆ.
Advertisement
ನೇತಾಜಿ ಮರಿ ಮೊಮ್ಮಗ ಈ ಕುರಿತು ಮಾತನಾಡಿ, ‘ಸುಳ್ಳು ಇತಿಹಾಸವನ್ನು ಯಾರೂ ಹೇಳಬಾರದು. ಸಾವರ್ಕರ್ ಸಿದ್ಧಾಂತಕ್ಕೆ ನೇತಾಜಿ ವಿರೋಧಿಯಾಗಿದ್ದರು. ನೇತಾಜಿ ಜಾತ್ಯಾತೀತ ಗುಣಗಳನ್ನು ಹೊಂದಿದವರು. ನಿಮ್ಮ ಸಿನಿಮಾ ಪ್ರಚಾರಕ್ಕೆ, ಗಿಮಿಕ್ ಗಾಗಿ ಸುಳ್ಳು ಹೇಳಬೇಡಿ. ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿ. ಇಲ್ಲವೇ ಸುಮ್ಮನಿದ್ದು ಬಿಡಿ’ ಎಂದು ಹೇಳಿದ್ದಾರೆ.
ನೇತಾಜಿಗೆ ಪ್ರೇರಣೆ ಕಂಡಿತಾ ಸಾವರ್ಕರ್ ಅಲ್ಲ. ಅವರಿಗೆ ಪ್ರೇರಣೆ ಸ್ವಾಮಿ ವಿವೇಕಾನಂದರು. ಅವರು ಅಧ್ಯಾತ್ಮದ ಗುರು ಕೂಡ ಆಗಿದ್ದರು. ಮತ್ತೊಬ್ಬರು ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ್ ದಾಸ್. ಇವರ ಹೊರತಾಗಿ ಯಾರೂ ಅವರಿಗೆ ಸ್ಫೂರ್ತಿ ಆಗಿರಲಿಲ್ಲವೆಂದು ನೇತಾಜಿ ಮರಿಮೊಮ್ಮಗ ಹೇಳಿದ್ದಾರೆ. ಸಾವರ್ಕರ್ ಅವರನ್ನು ನೇತಾಜಿ ವಿರೋಧಿಸುತ್ತಲೇ ಬಂದಿದ್ದರು ಎಂದು ಗಟ್ಟಿಯಾಗಿ ಹೇಳಿದ್ದಾರೆ.