ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಅಮೆರಿಕನ್ ಪ್ರಜೆಗಳನ್ನು ವಿವಾಹವಾದ ಸುಮಾರು ಅರ್ಧ ಮಿಲಿಯನ್ ದಾಖಲೆರಹಿತ ವಲಸಿಗರಿಗೆ ಪೌರತ್ವವನ್ನು ನೀಡುವ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಬಾಕಿ ಇರುವಾಗ ಜೋ ಬೈಡೆನ್ ಈ ಯೋಜನೆಯನ್ನು ಘೋಷಿಸಿದ್ದಾರೆ. ಹಾಗಿದ್ರೆ ಬೈಡೆನ್ ಅವರ ಹೊಸ ವಲಸೆ ಯೋಜನೆ (New Immigration Policy) ಏನು? ಭಾರತೀಯರಿಗೆ ಇದು ಹೇಗೆ ನೆರವಾಗುತ್ತದೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಬೈಡೆನ್ ಹೊಸ ವಲಸೆ ಯೋಜನೆ ಏನು?
ಅಮೆರಿಕದಲ್ಲಿ ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ದಾಖಲೆರಹಿತವಾಗಿ ವಾಸಿಸುತ್ತಿರುವ ಸಂಗಾತಿ ಅಥವಾ ಮಕ್ಕಳಿಗೆ ಯುಎಸ್ ಕಾನೂನು ಸ್ಥಾನಮಾನಕ್ಕಾಗಿ ದಾಖಲೆಗಳನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ.
Advertisement
ಈ ಯೋಜನೆಯ ಅರ್ಹತೆ ಪಡೆಯಲು, ಸಂಗಾತಿಗಳು ಮದುವೆಯಾಗಿರಬೇಕು ಮತ್ತು ಜೂನ್ 17, 2024ರಂತೆ ಕನಿಷ್ಠ 10 ವರ್ಷಗಳ ಕಾಲ ಅಮೆರಿಕದಲ್ಲಿ ವಾಸಿಸಿರಬೇಕು. ಅಲ್ಲದೇ US ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಫ್ಯಾಕ್ಟ್ ಶೀಟ್ ಪ್ರಕಾರ, ಸಾರ್ವಜನಿಕ ಸುರಕ್ಷತೆ ಅಥವಾ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟು ಮಾಡಬಾರದು.
Advertisement
Advertisement
ಶಾಶ್ವತ ವಾಸ ಅರ್ಜಿಗಳ ಪ್ರಕ್ರಿಯೆಯು ತಿಂಗಳುಗಳಿಂದ ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಯುಎಸ್‌ನಲ್ಲಿ ʼಗ್ರೀನ್ ಕಾರ್ಡ್ʼ ಪಡೆದವರು ಯುಎಸ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು.ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದು ಮತ್ತು ಅಲ್ಲಿನ ನಾಗರಿಕರನ್ನೇ ಮದುವೆಯಾಗಿರುವ ಹೊರದೇಶದ ಪ್ರಜೆಗಳು ಇನ್ನು ಮುಂದೆ ಅಲ್ಲಿಂದ ವಾಪಸ್ ತನ್ನ ದೇಶಕ್ಕೆ ಮರಳಬೇಕಾದ ಅನಿವಾರ್ಯತೆ ಇರುವುದಿಲ್ಲ. ಈ ಯೋಜನೆಯ ನಂತರ, ಅವರು ತಮ್ಮ ಕುಟುಂಬದೊಂದಿಗೆ ಅಮೆರಿಕ ದೇಶದಲ್ಲಿಯೇ ವಾಸಿಸಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, ವಲಸಿಗರು ಅಮೆರಿಕನ್ ಪ್ರಜೆಯನ್ನು ಮದುವೆಯಾಗುವ ಮೂಲಕ ಅಮೆರಿಕನ್ ಪೌರತ್ವವನ್ನು ಪಡೆಯಬೇಕಿತ್ತು. ಹಾಗಿದ್ದರೂ, ಗ್ರೀನ್ ಕಾರ್ಡ್ (Green Card) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಮ್ಮ ದೇಶಕ್ಕೆ ಮರಳಬೇಕಿತ್ತು.
Advertisement
ವಲಸೆ ಯೋಜನೆ ಯಾರಿಗೆ ಪ್ರಯೋಜನವನ್ನು ನೀಡುತ್ತದೆ?
ಅಮೆರಿಕದಲ್ಲಿ ದಾಖಲೆರಹಿತರಾಗಿ ನೆಲೆಸಿರುವ ಸುಮಾರು 5,00,000 ಸಂಗಾತಿಗಳು ಈ ಯೋಜನೆ ಪಡೆಯಲು ಅರ್ಹರಾಗಿದ್ದಾರೆ ಎಂದು DHS ಫ್ಯಾಕ್ಟ್ ಶೀಟ್ ಹೇಳುತ್ತದೆ. ಅಲ್ಲದೇ ಈ ಸಂಗಾತಿಗಳ ಸುಮಾರು 50,000 ಮಕ್ಕಳು ಸಹ ಈ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ.
ಹೊಸ ವಲಸೆ ನೀತಿ ಕಾರ್ಯಕ್ರಮದ ಅಡಿಯಲ್ಲಿ, ಯಾವುದೇ ಕುಟುಂಬಗಳು ಕಾನೂನು ಸ್ಥಾನಮಾನವನ್ನು ಪಡೆಯುವವರೆಗೆ ಅಮೆರಿಕ ದೇಶದಲ್ಲಿ ಉಳಿಯಲು ಅನುಮತಿ ನೀಡಲಾಗುತ್ತದೆ. ಈ ಸಂಗಾತಿಗಳು ಕೆಲಸದ ಪರವಾನಗಿ ಪಡೆಯಲು ಸಹ ಅರ್ಹರಾಗಿರುತ್ತಾರೆ. ಇದು ಅವರಿಗೆ ಆರ್ಥಿಕವಾಗಿ ಕೊಡುಗೆ ನೀಡಲು ಮತ್ತು ಅವರ ಕುಟುಂಬಗಳನ್ನು ಪೋಷಿಸಲು ಅನುವು ಮಾಡಿಕೊಡುತ್ತದೆ.
ಯಾವುದೇ ದಾಖಲೆಗಳನ್ನು ಹೊಂದಿರದ ಅನೇಕ ಭಾರತೀಯ ಅಮೆರಿಕನ್ ಕುಟುಂಬಗಳಿಗೆ ಸಹ ಇದರಿಂದ ಪರಿಣಾಮ ಬೀರಲಿದ್ದು, ಈಗ ಈ ನೀತಿ ಅವರನ್ನು ಗಡಿಪಾರು ಭೀತಿಯಿಂದ ಪಾರು ಮಾಡಲಿದೆ. ಅವರಿಗೆ ಅಮೆರಿಕದಲ್ಲಿಯೇ ಕಾನೂನುಬದ್ಧವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ನೀಡಲಿದ್ದು, ಇದರ ಜೊತೆಗೆ ದಾಖಲೆಗಳಿಲ್ಲದೆ ಉಳಿದಿರುವವರಿಗೆ ಪರಿಹಾರವನ್ನು ನೀಡಲಿದೆ. ಈ ನೀತಿಯು US ನಾಗರಿಕರ ಸರಿಸುಮಾರು 5 ಲಕ್ಷ ಸಂಗಾತಿಗಳಿಗೆ ಪೆರೋಲ್ ಇನ್ ಪ್ಲೇಸ್ ಪ್ರೋಗ್ರಾಂಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತದೆ, ಇದು ಅವರನ್ನು ಗಡೀಪಾರು ಮಾಡುವಿಕೆಯಿಂದ ರಕ್ಷಿಸುತ್ತದೆ ಮತ್ತು ಕನಿಷ್ಠ 10 ವರ್ಷಗಳ ಕಾಲ ದೇಶದಲ್ಲಿ ವಾಸಿಸುತ್ತಿದ್ದರೆ ಅವರಿಗೆ ಕೆಲಸದ ಪರವಾನಗಿಯನ್ನು ಒದಗಿಸುತ್ತದೆ ಎಂದು ತಿಳಿದು ಬಂದಿದೆ.
ಯೋಜನೆ ಜಾರಿ ಯಾವಾಗ?
ಬೇಸಿಗೆಯ ಅಂತ್ಯದ ವೇಳೆಗೆ ಯೋಜನೆಯ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಬೈಡೆನ್ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಹರು ಇದರ ಬಳಿಕವಷ್ಟೇ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
ಯುಎಸ್ ವಿಶ್ವವಿದ್ಯಾನಿಲಯಗಳಿಂದ ಪದವಿಗಳನ್ನು ಪಡೆದಿರುವ ಅಥವಾ ಡ್ರೀಮರ್ಸ್ ಸೇರಿದಂತೆ ತಮ್ಮ ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಪಡೆದಿರುವ ಹೆಚ್ಚು ನುರಿತ ದಾಖಲೆರಹಿತ ವಲಸಿಗರಿಗೆ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ವೇಗಗೊಳಿಸಲು ಶ್ವೇತಭವನ ಯೋಜಿಸುತ್ತಿದೆ.