ಬೀದರ್: ಬಡತನ ಮೆಟ್ಟಿನಿಂತು ರಾಷ್ಟ್ರ ಮಟ್ಟದ ಸಿಲಂಬಮ್ (ದೊಣ್ಣೆವರಸೆ) ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಬೀದರ್ ನ ವಿದ್ಯಾರ್ಥಿನಿಯೋರ್ವಳು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ರಾಷ್ಟ್ರ ಮಟ್ಟದ ದೊಣ್ಣೆವರಸೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ವಿದ್ಯಾರ್ಥಿನಿ ಭಾಗೀರಥಿ ಸಾಧನೆ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಸ್ಫೂರ್ತಿಯಾಗಿದೆ. ಬೀದರ್ ತಾಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಅಧ್ಯಯನ ಮಾಡುತ್ತಿರುವ ಭಾಗೀರಥಿ, ಪಾಠದ ಜತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾಳೆ. ಕಿತ್ತು ತಿನ್ನುವ ಬಡತನದ ಮಧ್ಯೆ ರಾಷ್ಟ್ರ ಮಟ್ಟದಲ್ಲಿ ಈ ಸಾಧನೆ ಮಾಡಿ ತೋರಿಸಿದ್ದಾಳೆ.
Advertisement
Advertisement
ದೊಣ್ಣೆವರಸೆಯಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿ ಗೆದ್ದಿರುವ ವಿದ್ಯಾರ್ಥಿನಿ, ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ್ದಳು. ಈ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿಗಳಲ್ಲಿ ಛಲದ ಜೊತೆಗೆ ಸಾಧನೆ ಮಾಡುವ ಮನಸ್ಸು ಹೊಂದಿದ್ದರೆ ಕ್ರೀಡೆಯಲ್ಲಿಯೂ ಉತ್ತಮ ಸಾಧನೆ ಮಾಡಬಹುದು ಎನ್ನುವುದಕ್ಕೆ ಭಾಗೀರಥಿ ನಿದರ್ಶನವಾಗಿದ್ದಾಳೆ.