ಬೀದರ್: ಮದುವೆಯಾದ 6 ತಿಂಗಳಲ್ಲಿಯೇ ನವ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಗ್ರಾಮದ ಅಂಜಲಿ (25) ಹಾಗೂ ಅವರ ಪತಿ ಉಮೇಶ ಮಡಿವಾಳ (28) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕಳೆದ ಮೇ ತಿಂಗಳಲ್ಲಿ ತಾಲೂಕಿನ ಮಂಠಾಳ ಗ್ರಾಮದ ಅಂಜಲಿಯನ್ನು ತಡೋಳ ಗ್ರಾಮದ ಉಮೇಶನಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದಾಗಿನಿಂದ ದಂಪತಿ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.
ಗುರುವಾರ ತಡ ರಾತ್ರಿ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಇಬ್ಬರು ಕೂಡಿಯೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಬಾವಿಯಿಂದ ಶವಗಳನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಮಂಠಾಳ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್‍ಐ ಅರುಣಕುಮಾರ ಆಗಮಿಸಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.