– ಪತಿಯ ಶವ ಸಾಗಿಸಲು ಪತ್ನಿಯ ಪರದಾಟ
ಬೆಂಗಳೂರು: ನೀರು ತರಲು ರೈಲಿನಿಂದ ಕೆಳಗಿಳಿದಿದ್ದ ಪತಿ ಶವವಾಗಿ ಪತ್ತೆಯಾದ ಘಟನೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಪವನ್ ವಿಜಯ್‍ಕುಮಾರ್ ಪಾಟೀಲ್ (32) ಸಾವನ್ನಪ್ಪಿದ ದುರ್ದೈವಿ. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಭಾನುವಾರವೇ ಘಟನೆ ನಡೆದಿದ್ದು, ಪವನ್ ಅವರು ಮೃತಪಟ್ಟಿರುವುದು ಪತ್ನಿಗೆ ಮಂಗಳವಾರ ಗೊತ್ತಾಗಿದೆ.
ಆಗಿದ್ದೇನು?
ಬೀದರ್ ಜಿಲ್ಲೆಯ ಪವನ್ ವಿಜಯ್‍ಕುಮಾರ್ ಪಾಟೀಲ್ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲು ಪವನ್ ಪತ್ನಿ ಹಾಗೂ ಮಗುವಿನ ಜೊತೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಪಡೆದು ಭಾನುವಾರ ಬೀದರ್ ಗೆ ರೈಲಿನಲ್ಲಿ ಮರಳುತ್ತಿದ್ದರು. ಈ ವೇಳೆ ಯಶವಂತಪುರ ನಿಲ್ದಾಣದಲ್ಲಿ ರಾತ್ರಿ ರೈಲು ನಿಂತಿದ್ದಾಗ ಪವನ್ ನೀರು ತರಲು ಹೋಗಿದ್ದರು. ರೈಲು ಆರಂಭವಾದರೂ ಪತಿ ಬಾದರಿದ್ದಾಗ ಗಾಬರಿಗೊಂಡ ಪವನ್ ಅವರ ಪತ್ನಿ ಮಗುವನ್ನು ಎತ್ತಿಕೊಂಡು ರೈಲು ಇಳಿದಿದ್ದರು.
ರೈಲು ಹತ್ತಲು ಹೋಗಿ ಪವನ್ ಕೆಳಗೆ ಬಿದ್ದಿದ್ದರು. ಅಷ್ಟೇ ಅಲ್ಲದೆ ಅವರ ಅಂಗಿ ರೈಲಿಗೆ ಸಿಕ್ಕಿಕೊಂಡಿದ್ದರಿಂದ ಮೃತದೇಹ ರೈಲು ನಿಲ್ದಾಣದಿಂದ ದೂರದಲ್ಲಿ ಬಿದ್ದಿತ್ತು. ಆದರೆ ಪವನ್ ಅವರ ಪತ್ನಿ ಮಾತ್ರ ಪತಿಗಾಗಿ ಹುಡುಕಾಟ ನಡೆಸಿದ್ದರು. ಭಾನುವಾರ ರಾತ್ರಿ, ಸೋಮವಾರ ಹಾಗೂ ಮಂಗಳವಾರ ಪತಿಯನ್ನು ಹುಡುಕಿದ್ದಾರೆ. ಆದರೆ ಪತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಯಶವಂತಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ವೇಳೆ ಪವನ್ ಅವರ ಪತ್ನಿ ಪತಿಯ ಫೋಟೋ ತೋರಿಸಿದ್ದಾರೆ. ಫೋಟೋವನ್ನು ನೋಡಿದ ಪೊಲೀಸರು ಪವನ್ ವಿಜಯ್‍ಕುಮಾರ್ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಪತಿಯ ಸಾವಿನ ಸುದ್ದಿ ಕೇಳಿ ಪವನ್ ಅವರ ಪತ್ನಿ ಆಘಾತಕ್ಕೆ ಒಳಾಗದರು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಪತಿ ಈಗ ಹೆಣವಾಗಿದ್ದಾರೆ ಎಂದು ಕಣ್ಣೀರು ಹಾಕಿದರು. ಮಗುವನ್ನು ಎತ್ತಿಕೊಂಡು ಪತಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಪವನ್ ಪತ್ನಿ ಪರದಾಟುವಂತ ಪರಿಸ್ಥಿತಿ ನಿರ್ಮಾಣವಾಗಿದೆ.