ಬೀದರ್: ನಿವೃತ್ತಿ ಹಣಕ್ಕಾಗಿ ಸ್ವತಃ ಮೊಮ್ಮಗನೇ ತನ್ನ ಅಜ್ಜಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಕೊಲೆಯಾದ ಅಜ್ಜಿಯನ್ನು ಲೀಲಾವತಿ (62) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಮೊಮ್ಮಗ ಆಕಾಶ್ (21) ನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಣಜಿ ಬಿಸಿಎಂ ಹಾಸ್ಟೆಲಿನಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಸುತ್ತಿದ್ದ ಲೀಲಾವತಿ ಕೆಲ ದಿನಗಳ ಹಿಂದೆ ನಿವೃತ್ತಿ ಹೊಂದಿದ್ದು, ನಿವೃತ್ತಿಯ ನಂತರ 6 ಲಕ್ಷ ರೂ. ಹಣ ಬಂದಿತ್ತು. ಈ ಹಣದ ಮೇಲೆ ಕಣ್ಣಿಟ್ಟಿದ್ದ ಮೊಮ್ಮಗ ಆಕಾಶ್ ನನಗೆ ಅ ಹಣ ಕೊಡು ಎಂದು ಹಲವು ತಿಂಗಳಿನಿಂದ ಅಜ್ಜಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ಹಣ ಕೊಡಲು ನಿರಾಕರಿಸಿದ ಅಜ್ಜಿಯನ್ನು ಆಕಾಶ್ ಇಂದು ಕೊಲೆ ಮಾಡಿದ್ದಾನೆ.
ಈ ಸಂಬಂಧ ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.