ಬೀದರ್: ಜಿಂಕೆಗಳ ಕಾಟದಿಂದಾಗಿ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಾಳ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ಸಾಲ ಮಾಡಿ ಬೆಳೆದ ಬೆಳೆಗಳನ್ನು ಹಿಂಡು ಹಿಂಡಾಗಿ ಬರುವ ಜಿಂಕೆಗಳು ತಿಂದು ಹಾಕುತ್ತಾ ರೈತರ ಪಾಲಿನ ಶತ್ರುಗಳಾಗಿವೆ. ಅಲ್ಲದೇ ಚಟ್ನಾಳ್ ಗ್ರಾಮದ ಗ್ರಾಮಸ್ಥರು ಜಿಂಕೆಗಳ ಉಪಟಳಕ್ಕೆ ತೀವ್ರವಾಗಿ ಬೇಸತ್ತು ಹೋಗಿದ್ದಾರೆ.
ಗದ್ದೆಯಲ್ಲಿ ಬೆಳೆದ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಗದ್ದೆಗಳಿಗೆ ಬರುವ ಜಿಂಕೆಗಳನ್ನು ಓಡಿಸುವುದು ಕಷ್ಟವಾಗಿದ್ದು, ಜಿಂಕೆಗಳು ಬರದಂತೆ ಬೇಲಿ ಹಾಕಲು ಸಾಧ್ಯವಾಗುತ್ತಿಲ್ಲ. ಮುಂಗಾರು ಹಂಗಾಮಿನ ಬೆಳೆಗಳಾದ ತೊಗರಿ, ಉದ್ದು, ಹೆಸರು, ಜೋಳ, ಸೋಯಾಬಿನ್ ಸಸಿಗಳನ್ನು ತಿಂದು ಹಾಳು ಮಾಡಿತ್ತಿವೆ. ಜಿಂಕೆಯ ದಾಳಿಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾಳಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಕಬ್ಬಿನ ಗದ್ದೆಗಳಿಗೆ ಲಗ್ಗೆ ಇಡುವ ಜಿಂಕೆಗಳ ಹಿಂಡು ಫಲವತ್ತಾದ ಬೆಳೆಯನ್ನು ತಿಂದು ಹಾಕುತ್ತಿವೆ. ಇದರಿಂದ ಬೇಸತ್ತ ರೈತರು ಅರಣ್ಯ ಇಲಾಖೆಗೆ ಹಲವು ಬಾರಿ ದೂರನ್ನು ನೀಡಿದ್ದಾರೆ. ಆದರೆ ಈ ಕುರಿತು ಯಾವುದೇ ಪ್ರಯೋಜನವಾಗಿಲ್ಲ ಎಂದು ಅರಣ್ಯ ಇಲಾಖೆಯ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.